ಕಲಬುರಗಿ| ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಬ್ಯಾಂಕ್ ನೌಕರರಿಂದ ಸಾಂಕೇತಿಕ ಧರಣಿ

ಕಲಬುರಗಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್ ವತಿಯಿಂದ ಮೇ 25 ಮತ್ತು 26ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಈ ನಿಮಿತ್ತ ಸೂಪರ್ ಮಾರ್ಕೆಟ್ ನ ಎಸ್‌ಬಿಐ ಕಚೇರಿ ಎದುರು ಬ್ಯಾಂಕ್ ನೌಕರರು ಸಾಂಕೇತಿಕ ಧರಣಿ ನಡೆಸಿದರು.
ಫೆಡರೇಶನ್ ಹಲವು ವರ್ಷಗಳಿಂದ ಎಸ್‌ಬಿಐ ಆಡಳಿತ ಮಂಡಳಿಯೊಂದಿಗೆ ಸಂವಾದ ಹಾಗೂ ಮನವೊಲಿಕೆ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದರೂ, ನಿರ್ವಹಣೆಯ ನಿರ್ಲಕ್ಷ್ಯ ಧೋರಣೆಯಿಂದ ಮುಷ್ಕರ ಅನಿವಾರ್ಯವಾಗಿದೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು.
ನೌಕರರ ಪ್ರಮುಖ ಬೇಡಿಕೆಗಳಲ್ಲಿ ಮೆಸೆಂಜರ್ ಹಾಗೂ ಶಸ್ತ್ರಸಜ್ಜಿತ ರಕ್ಷಕರ ತಕ್ಷಣದ ನೇಮಕಾತಿ, 2019ರಿಂದ ಸೇವೆಗೆ ಸೇರಿದ ನೌಕರರಿಗೆ IBA ವರ್ಗಾವಣೆ ಜಾರಿ, ಶಾಶ್ವತ ಹುದ್ದೆಗಳ ಔಟ್‌ಸೋರ್ಸಿಂಗ್ ಸ್ಥಗಿತ, ವೇತನ ಸಮಾನತೆ ಸಮಸ್ಯೆ ಪರಿಹಾರ, OPS ಒಳಪಡುವ ನೌಕರರಿಗೆ ಪಿಂಚಣಿ ನಿಧಿ ನಿರ್ವಹಣೆಯಲ್ಲಿ ಆಯ್ಕೆ ಅವಕಾಶ, ಸಮರ್ಪಕ ಸಿಬ್ಬಂದಿ ನೇಮಕಾತಿ ಹಾಗೂ ವೈದ್ಯಕೀಯ ಮರುಪಾವತಿ ಯೋಜನೆಯಲ್ಲಿ ಸುಧಾರಣೆಗಳನ್ನು ಒಳಗೊಂಡಿವೆ.
ಬ್ಯಾಂಕ್ ನೌಕರರ ಹೋರಾಟ ನ್ಯಾಯಸಮ್ಮತವಾಗಿದ್ದು, ಸಾರ್ವಜನಿಕರು ಹಾಗೂ ಗ್ರಾಹಕರು ಮುಷ್ಕರಕ್ಕೆ ಬೆಂಬಲ ನೀಡಬೇಕು ಎಂದು ಸ್ಟೇಟ್ ಬ್ಯಾಂಕ್ ಸ್ಟಾಫ್ ಯೂನಿಯನ್ ಮನವಿ ಮಾಡಿದೆ.
ಧರಣಿಯಲ್ಲಿ ಉಪ ಪ್ರಧಾನ ಕಾರ್ಯದರ್ಶಿ ನವೀನ ಕಾಗಲ್ಕರ, ಸಹಾಯಕ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕೃಷ್ಣ ಜೋಶಿ, ರಾಘವೇಂದ್ರ ಕುಲಕರ್ಣಿ, ರೀಟಾ ರಾಥೋಡ್, ಟಿ. ಸುಬ್ಬಯ್ಯ, ರವಿಚಂದ್ರ ಹಾಗೂ ಮಲ್ಲರಾವು ಕುಲಕರ್ಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.






