Kalaburagi | ಮೇ 15ರಂದು ಶಹಾಪುರದಲ್ಲಿ ಬಸವಾದಿ ಶರಣರ ಜಾಗೃತಿ ಸಮಾವೇಶ

ಕಲಬುರಗಿ: ಯಾದಗಿರಿ ಜಿಲ್ಲೆಯಲ್ಲಿ ಬಸವಾದಿ ಶರಣರ ಹೆಸರಿನಲ್ಲಿ ಆಯೋಜಿಸಲಾಗುತ್ತಿರುವ “ಹಿಂದೂ ಸಮಾವೇಶ”ದ ಮೂಲಕ ಶರಣರ ಸಮಾನತೆಯ ತತ್ವಗಳಿಗೆ ವಿರುದ್ಧವಾದ ಹಿಂದುತ್ವದ ವಿಚಾರಧಾರೆಗಳನ್ನು ಸೇರಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿರುವ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ವಿವಿಧ ಬಸವಪರ ಸಂಘಟನೆಗಳು, ಇದಕ್ಕೆ ಪರ್ಯಾಯವಾಗಿ ಮೇ 15ರಂದು ಶಹಾಪುರದಲ್ಲಿ “ಬಸವಾದಿ ಶರಣರ ಜಾಗೃತಿ ಸಮಾವೇಶ” ಹಮ್ಮಿಕೊಂಡಿರುವುದಾಗಿ ಘೋಷಿಸಿವೆ.
ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ ಮಾತನಾಡಿ, “ಮೇ 15ರಂದು ಸಂಜೆ 5 ಗಂಟೆಗೆ ಶಹಾಪುರದ ಹಳೇ ಬಸ್ ನಿಲ್ದಾಣ ಎದುರಿನ ಶಾಲಾ ಮೈದಾನದಲ್ಲಿ ಜಾಗೃತಿ ಸಮಾವೇಶ ನಡೆಯಲಿದೆ. ಜಾಗತಿಕ ಲಿಂಗಾಯತ ಮಹಾಸಭೆ, ಬಸವಪರ ಸಂಘಟನೆಗಳು, ಕಾಯಕರ ಶರಣರ ಒಕ್ಕೂಟ, ಸೌಹಾರ್ದ ಕರ್ನಾಟಕ ಹಾಗೂ ವಿವಿಧ ದಲಿತಪರ ಸಂಘಟನೆಗಳ ಸಹಯೋಗದಲ್ಲಿ ಸಮಾವೇಶ ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಸವ ಅಭಿಮಾನಿಗಳು ಹಾಗೂ ಶರಣರ ಅನುಯಾಯಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
“900 ವರ್ಷಗಳ ಹಿಂದೆಯೇ ವೇದ, ಆಗಮ ಮತ್ತು ಪುರಾಣಗಳನ್ನು ಪ್ರಶ್ನಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶರಣರು ಹೋರಾಟ ನಡೆಸಿದ್ದರು. ಅಂತಹ ಶರಣರ ತತ್ವಗಳನ್ನು ವೈದಿಕ ಚೌಕಟ್ಟಿನೊಳಗೆ ಸೆರೆಹಿಡಿಯುವ ಪ್ರಯತ್ನ ನಡೆಯುತ್ತಿದೆ. ಜನರಲ್ಲಿ ಬಸವ ಚಿಂತನೆ ಮತ್ತು ಶರಣರ ವಿಚಾರಧಾರೆಗಳ ನೈಜ ಅರಿವು ಮೂಡಿಸುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಶೆಟಗಾರ ಹೇಳಿದರು.
ಹೋರಾಟಗಾರ್ತಿ ಹಾಗೂ ಚಿಂತಕಿ ಡಾ. ಮೀನಾ ಬಾಳಿ ಮಾತನಾಡಿ, “ಕೆಲವರು ‘ಹಿಂದೂ ಸಮಾವೇಶ’ದ ಹೆಸರಿನಲ್ಲಿ ಮನುಸ್ಮೃತಿ ತತ್ವಗಳನ್ನು ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಲಿಂಗಾಯತ ಮಠಾಧೀಶರನ್ನು ಬಳಸಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ. ಶರಣರ ಅನುಯಾಯಿಗಳನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಈ ಸಮಾವೇಶದ ಅಂತರಾಳದಲ್ಲಿ ಆರ್‌ಎಸ್‌ಎಸ್‌ನ ಅಜೆಂಡಾ ಅಡಗಿದೆ” ಎಂದು ಆರೋಪಿಸಿದರು.
ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ ಅವರು, “ಶಹಾಪುರದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ಸರ್ಕಾರ ನಿಷೇಧಿಸಬೇಕು. ಹಿಂದೂ ಸಮಾವೇಶ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ, ಆದರೆ ಬಸವಾದಿ ಶರಣರನ್ನು ಅದಕ್ಕೆ ಜೋಡಿಸುವುದು ಸರಿಯಲ್ಲ. ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ” ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಘೋಳಿ, ರಾಜಶೇಖರ ಯಂಕಂಚಿ, ಆರ್.ಕೆ. ಹುಡಗಿ, ಶಿವಶಂಕರ ದೇಗಾಂವ, ರವೀಂದ್ರ ಶಾಬಾದಿ, ಶಾಂತಪ್ಪ ಪಾಟೀಲ್, ಹಣಮಂತರಾಯ ಪಾಟೀಲ್, ಭೀಮಣ್ಣ ಬೋನಾಳ, ಸುಧಾಮ ಧನ್ನಿ, ಚಂದಮ್ಮ ಗೋಳಾ, ಲವಿತ್ರ ವಸ್ತ್ರದ, ದಯಾನಂದ ಯಂಕಂಚಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.






