ಕಲಬುರಗಿ | ಎಲ್ಲರೂ ಸಮಾನರೆಂದು ವಚನಗಳ ಮೂಲಕ ಬಸವಣ್ಣನವರು ಸಾರಿದ್ದಾರೆ: ಡಾ.ಶಾಂತಲಿಂಗ ಘಂಟೆ

ಕಲಬುರಗಿ: ಬಸವಣ್ಣನವರು ಜಾತಿ ಮತ ಭೇದವಿಲ್ಲದೆ ಎಲ್ಲರೂ ಸಮಾನರು ಎಂದು ತಮ್ಮ ವಚನಗಳ ಮೂಲಕ ತಿಳಿಸಿದ್ದಾರೆ ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಾಂತಲಿಂಗ ಘಂಟೆ ಹೇಳಿದರು.
ಅಖಿಲ ಭಾರತ ಶಿವಾನುಭವ ಮಂಟಪ ಶರಣಬಸವೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರಾವಣ ಮಾಸದ ಶಿವಾನುಭವ ಸಾಂಸ್ಕೃತಿಕ ಕಾಯಕ್ರಮಗಳ ಉಪನ್ಯಾಸ ಮಾಲಿಕೆಯಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಈ ವಿಷಯದ ಶೀರ್ಷಿಕೆ ಅಡಿಯಲ್ಲಿ ಬಸವಣ್ಣನವರು ಮತ್ತು ಭಾತೃತ್ವ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಬಸವಣ್ಣನವರು ಸಾಮಾಜಿಕ ಸಮಾನತೆ ಮತ್ತು ಭಾತೃತ್ವವನ್ನು ಸಾರಿದ ಮಹಾನ್ ಸಮಾಜ ಸುಧಾರಕರು. ಅವರ ವಚನಗಳಲ್ಲಿ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ ಎಲ್ಲರೂ ಸೋದರತ್ವದಿಂದ ಬಾಳಬೇಕು ಮತ್ತು ಕಾಯಕದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬೋಧಿಸಿದರು. ಜಾತಿ ವ್ಯವಸ್ಥೆಯನ್ನು ಬಲವಾಗಿ ವಿರೋಧಿಸಿದರು ಮತ್ತು ಎಲ್ಲರೂ ಒಂದೇ ತಾಯಿಯ ಮಕ್ಕಳೆಂದು ಸಾರಿದರು.
ಇಂದಿನ ಸಮಾಜದಲ್ಲಿಯೂ ಸಾಮಾಜಿಕ ತಾರತಮ್ಯ ಮತ್ತು ಅಸಮಾನತೆಗಳಿವೆ. ಬಸವಣ್ಣನವರ ಭಾತೃತ್ವದ ಸಂದೇಶವು ಈ ತಾರತಮ್ಯಗಳನ್ನು ಹೋಗಲಾಡಿಸಲು ಮತ್ತು ಎಲ್ಲರೂ ಸಮಾಜದಲ್ಲಿ ಸಮಾನವಾಗಿ ಬದುಕಲು ಪ್ರೇರಣೆ ನೀಡುತ್ತದೆ. ಅವರ ವಚನಗಳಲ್ಲಿನ ಕಾಯಕವೇ ಕೈಲಾಸ ಎಂಬ ತತ್ವವು ಇಂದಿನ ಯುವ ಪೀಳಿಗೆಗೆ ದುಡಿಮೆಯ ಮಹತ್ವವನ್ನು ತಿಳಿಸುತ್ತದೆ. ಅವರ ದಯೆ, ಕರುಣೆ ಮತ್ತು ಸಹಾನುಭೂತಿಯ ಸಂದೇಶವು ಇಂದಿನ ಸಮಾಜದಲ್ಲಿನ ಸಂಘರ್ಷಗಳನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಬಸವಣ್ಣನವರು ಕೇವಲ ಧಾರ್ಮಿಕ ನಾಯಕರಾಗಿರದೆ, ಸಾಮಾಜಿಕ ಸುಧಾರಕರಾಗಿದ್ದರು. ಅವರು ಭಾತೃತ್ವ, ಸಮಾನತೆ ಮತ್ತು ಕಾಯಕಕ್ಕೆ ಹೆಚ್ಚಿನ ಮಹತ್ವ ನೀಡಿದರು. ಅವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜವನ್ನು ಸುಧಾರಿಸಲು ದಾರಿದೀಪವಾಗಿವೆ.







