Kalaburagi | ಬಸವಣ್ಣನವರ ತತ್ವಗಳು ಮಾನವ ಏಳಿಗೆಯ ಸೂತ್ರಗಳು : ಶಶೀಲ್ ಜಿ.ನಮೋಶಿ

ಕಲಬುರಗಿ: ಮಾನವ ಕಲ್ಯಾಣಕ್ಕಾಗಿ ಶ್ರಮಿಸಿದ ಕಾಯಕಯೋಗಿ ಬಸವಣ್ಣರಂತಹ ಮಹನೀಯರ ತತ್ವಾದರ್ಶಗಳಿಂದ ಸಮಾಜದ ಏಳಿಗೆ ಸಾಧ್ಯ. ಎಲ್ಲ ಜಾತಿ, ಧರ್ಮವನ್ನು 12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ ಒಂದುಗೂಡಿಸಿ ವೈಚಾರಿಕ ಕ್ರಾಂತಿ ಮೂಲಕ ಮನುಕುಲಕ್ಕೆ ಸಮಾನತೆ ಸಂದೇಶ ಸಾರಿದ ಮಹಾಪುರಷ ಬಸವಣ್ಣರಾಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಹೇಳಿದರು.
ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದ 893ನೇ ಬಸವ ಜಯಂತಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾಯಕವೇ ಕೈಲಾಸ ಎಂದು ಹೇಳಿದ ಅಣ್ಣ ಬಸವಣ್ಣನವರು ಪ್ರತಿಯೊಬ್ಬರೂ ಕಡ್ಡಾಯವಾಗಿ ದುಡಿಯಬೇಕು, ದುಡಿಮೆಯೇ ದೇವರಿಗೆ ಸಮಾನ. ಯಾವುದೇ ಕೆಲಸವೂ ಸಣ್ಣದಲ್ಲ ಅಥವಾ ದೊಡ್ಡದಲ್ಲ ಎಂಬುದಾಗಿ ಪ್ರತಿಪಾದಿಸಿದರು ನಾವು ನೀವು ಸಹ ಈ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲೆಬೇಕು ಎಂದು ಹೇಳಿದರು.
ಭಾರತ ದೇಶ ಅತ್ತ್ಯುತ್ತಮವಾಗಿ ಮುನ್ನಡೆಯಬೇಕಾದರೆ ನಮ್ಮ ಸಮಾಜ ಹಾಗೂ ದೇಶದಲ್ಲಿನ ಮಹಿಳೆಯರಿಗೆ ಸಮಾನವಾದ ಅವಕಾಶ ಮಾಡಿಕೊಡಬೇಕಾಗಿದೆ. ಆವಾಗ ಮಾತ್ರ ನಮ್ಮ ದೇಶ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಬಸವಣ್ಣನವರು 12ನೇ ಶತಮಾನದಲ್ಲಿಯೇ ಮಹಿಳೆಯರಿಗೆ ಸಮಾನತೆ ನೀಡುವ ಕೆಲಸ ಮಾಡಿದ್ದರು. ಅವರು ಎಂಟನೇ ವರ್ಷದಲ್ಲಿದ್ದಾಗ ಕುಟುಂಬದಲ್ಲಿ ತಮ್ಮ ಸಹೋದರಿಗೆ ಸಮಾನತೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಅವರು ಕೂಡಲ ಸಂಗಮಕ್ಕೆ ಹೋಗುವ ಹಾಗಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಅವರು ಮಹಿಳೆಯರ ಸಮಾನತೆಗಾಗಿ ಹೋರಾಡಿದ ದೊಡ್ಡ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ಉಪಾಧ್ಯಕ್ಷರಾದ ರಾಜಾ ಭಿ.ಭೀಮಳ್ಳಿ ಮಾತನಾಡಿದರು.
ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಕೈಲಾಸ ಪಾಟೀಲ್, ಆಡಳಿತ ಮಂಡಳಿಯ ಸದಸ್ಯ ಡಾ.ಕಿರಣ ದೇಶಮುಖ್, ವೈದ್ಯಕೀಯ ಕಾಲೇಜಿನ ಸಂಚಾಲಕರಾದ ಡಾ.ಶರಣಬಸಪ್ಪ ಹರವಾಳ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು, ಡೀನ್ ಡಾ ಶರಣಗೌಡ ಪಾಟೀಲ, ವೈಸ್ ಡೀನ್ ಡಾ.ವಿ.ಎಸ್.ಕಪ್ಪಿಕೇರಿ, ವೈದ್ಯಾಧಿಕಾರಿಗಳಾದ ಡಾ.ಮಲ್ಲಿಕಾರ್ಜುನ ತೇಗನೂರ, ಡಾ ಪೂಜಾರಿ, ಡಾ ಮಲ್ಲಿಕಾರ್ಜುನ ಭಂಡಾರ ಎಲ್ಲ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.






