ಕಲಬುರಗಿ–ಬೆಂಗಳೂರು ಸ್ಟಾರ್ ಏರ್ ವಿಮಾನ ಸೇವೆ ಜೂ.10ರ ಬೆಳಿಗ್ಗೆಯಿಂದಲೇ ಆರಂಭ

ಸಾಂದರ್ಭಿಕ ಚಿತ್ರ | Photo Credit : magnific
ಕಲಬುರಗಿ: ಕಲಬುರಗಿ–ಬೆಂಗಳೂರು ನಡುವಿನ ಸ್ಟಾರ್ ಏರ್ ವಿಮಾನ ಸೇವೆಯ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಜೂ.10ರಿಂದ ಆರಂಭವಾಗಲಿರುವ ಸೇವೆಯನ್ನು ಸಂಜೆ ಬದಲಾಗಿ ಬೆಳಿಗ್ಗೆಯಿಂದಲೇ ನಿಗದಿಪಡಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆ.ಕೆ.ಸಿ.ಸಿ.ಐ) ತಿಳಿಸಿದೆ.
ಈ ಕುರಿತು ಸ್ಟಾರ್ ಏರ್ ಸಂಸ್ಥೆಯು ಕೆ.ಕೆ.ಸಿ.ಸಿ.ಐಗೆ ಅಧಿಕೃತ ಮಾಹಿತಿ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರು, ಉದ್ಯಮಿಗಳು ಹಾಗೂ ಪ್ರಯಾಣಿಕರಿಂದ ವ್ಯಕ್ತವಾದ ಬೇಡಿಕೆ ಮತ್ತು ಕೆ.ಕೆ.ಸಿ.ಸಿ.ಐ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ ಬೆಳಗಿನ ವಿಮಾನ ಸೇವೆಯನ್ನು ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದೆ.
ಕಲಬುರಗಿ–ಬೆಂಗಳೂರು ಮಾರ್ಗದಲ್ಲಿ ಬೆಳಗಿನ ವಿಮಾನ ಸೇವೆ ಆರಂಭಿಸಬೇಕೆಂಬುದು ಹಲವು ವರ್ಷಗಳಿಂದ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿತ್ತು. ವ್ಯಾಪಾರ, ಉದ್ಯಮ, ಶಿಕ್ಷಣ ಹಾಗೂ ವೈದ್ಯಕೀಯ ಅಗತ್ಯಗಳಿಗಾಗಿ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಇದು ಹೆಚ್ಚು ಅನುಕೂಲಕರವಾಗಲಿದೆ ಎಂದು ಅಭಿಪ್ರಾಯ ತಿಳಿಸಿದೆ.
ಈ ಸಂಬಂಧ ಕೆ.ಕೆ.ಸಿ.ಸಿ.ಐ ನಿರಂತರವಾಗಿ ಸ್ಟಾರ್ ಏರ್ ಸಂಸ್ಥೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದು, ಬೆಳಗಿನ ವೇಳೆಯ ಸೇವೆ ಆರಂಭಿಸಲು ಒತ್ತಾಯಿಸಿತ್ತು.
ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಂಡುಬರುತ್ತಿರುವ ಹಿನ್ನೆಲೆ, ಬೆಳಗಿನ ಸೇವೆಯ ಜೊತೆಗೆ ಸಂಜೆ ವೇಳೆಯಲ್ಲಿಯೂ ಹೆಚ್ಚುವರಿ ವಿಮಾನ ಸೇವೆ ಆರಂಭಿಸುವಂತೆ ಕೆ.ಕೆ.ಸಿ.ಸಿ.ಐ ಸಂಸ್ಥೆ ಸ್ಟಾರ್ ಏರ್ಗೆ ಮತ್ತೊಮ್ಮೆ ಮನವಿ ಮಾಡಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿಯಲ್ಲಿ ಕಲಬುರಗಿಯಿಂದ ಇನ್ನಷ್ಟು ನಗರಗಳಿಗೆ ವಿಮಾನ ಸಂಪರ್ಕ ವಿಸ್ತರಣೆ ಆಗಲಿ ಹಾಗೂ ಹೆಚ್ಚಿನ ವಿಮಾನ ಸೇವೆಗಳು ಲಭ್ಯವಾಗಲಿ ಎಂದು ಕೆ.ಕೆ.ಸಿ.ಸಿ.ಐ ಸಂಸ್ಥೆ ಆಶಯ ವ್ಯಕ್ತಪಡಿಸಿದೆ.






