Kalaburagi | ಸೆ.17ರಂದು ಭೂಸನೂರಿನಲ್ಲಿ ಭೈರಪ್ಪ ಗೌಡ ಭೂಸನೂರ ಅವರ ಸ್ಮರಣಾ ಕಾರ್ಯಕ್ರಮ

ಕಲಬುರಗಿ: ನಿಝಾಮರ ಆಡಳಿತ ಹಾಗೂ ರಝಾಕಾರರ ವಿರುದ್ಧ ಹೋರಾಡಿ ಕಲ್ಯಾಣ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದ ಧೈರ್ಯವೀರ ಭೈರಪ್ಪ ಗೌಡ ಭೂಸನೂರ ಅವರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯನ್ನು ಸ್ಮರಿಸುವ ಕಾರ್ಯಕ್ರಮವನ್ನು ಕಲ್ಯಾಣ ಕರ್ನಾಟಕ ವಿಮೋಚನ ದಿನದ ಅಂಗವಾಗಿ ಸೆ.17ರಂದು ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಗುಲಬರ್ಗಾ ಡಿಸ್ಟ್ರಿಕ್ಟ್ ಹಿಂದೂ ಗಾಣಿಗರ ಸಂಘದ ಅಧ್ಯಕ್ಷ ಶರಣಕುಮಾರ ಜಿಲ್ಲಾಡ ತಿಳಿಸಿದ್ದಾರೆ.
1896ರ ಮಾರ್ಚ್ 27ರಂದು ಭೂಸನೂರ ಗ್ರಾಮದಲ್ಲಿ ಸಾಯಿಬಣ್ಣಗೌಡ ಹಾಗೂ ರೇವಮ್ಮಗೌಡತಿ ದಂಪತಿಯ ಪುತ್ರರಾಗಿ ಜನಿಸಿದ ಭೈರಪ್ಪ ಗೌಡರು, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಗಡಿಭಾಗದ ಹಲವು ಪ್ರದೇಶಗಳಲ್ಲಿ ಹೋರಾಟದ ಶಿಬಿರಗಳನ್ನು ಸ್ಥಾಪಿಸಿ ಯುವಕರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಭೂಸನೂರ, ದುಧನಿ, ಆಳಂದ, ಮಹಾಗಾಂವ, ಸಾವಳಗಿ, ಹಿಪ್ಪರಗಿ, ಯಳಸಂಗಿ ಹಾಗೂ ಅಕ್ಕಲಕೋಟ ಸೇರಿದಂತೆ ಹಲವು ಪ್ರದೇಶಗಳಲ್ಲಿ ಹೋರಾಟಗಾರರನ್ನು ಸಂಘಟಿಸಿ, ಅವರಿಗೆ ಆಹಾರ, ಆಶ್ರಯ ಹಾಗೂ ವೈದ್ಯಕೀಯ ನೆರವು ಒದಗಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡಿದ್ದರು ಎಂದು ವಿವರಿಸಿದರು.
ರಜಾಕಾರರ ವಿರುದ್ಧ ಗೆರಿಲ್ಲಾ ಮಾದರಿಯ ಹೋರಾಟ ನಡೆಸಿದ್ದ ಭೈರಪ್ಪ ಗೌಡರ ಸಾಹಸಗಾಥೆಗಳು ಇಂದಿಗೂ ಈ ಭಾಗದ ಜನರ ನೆನಪಿನಲ್ಲಿ ಜೀವಂತವಾಗಿವೆ. 1947ರ ಆಗಸ್ಟ್ 20ರಂದು ಕಡಗಂಚಿ, ನಿಂಬರ್ಗಾ, ಭೂಸನೂರ ಹಾಗೂ ಯಳಸಂಗಿ ಭಾಗಗಳಲ್ಲಿ ರಜಾಕಾರರ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಅವರು ವಹಿಸಿದ್ದ ಪಾತ್ರ ಗಮನಾರ್ಹವಾಗಿತ್ತು ಎಂದು ಸ್ಥಳೀಯ ಹಿರಿಯರು ಇಂದಿಗೂ ಸ್ಮರಿಸುತ್ತಾರೆ ಎಂದು ಹೇಳಿದರು.






