Kalaburagi | ಭೂಮಾನಂದ್ ಹತ್ಯೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಬಿಎಸ್‌ಪಿ ಆಗ್ರಹ

ಕಲಬುರಗಿ : ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ರಾಯಚೂರು ಜಿಲ್ಲಾ ಉಸ್ತುವಾರಿಯಾಗಿದ್ದ ಭೂಮಾನಂದ್ ಅವರ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಿ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಎಸ್‌ಪಿ ಕಲಬುರಗಿ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ ಪಕ್ಷದ ಮುಖಂಡರು, ಭೂಮಾನಂದ್ ಅವರ ಹತ್ಯೆ ಖಂಡನೀಯವಾಗಿದ್ದು, ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ತಿಳಿಸಿದರು.
ಪ್ರಕರಣದ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಮೃತ ಭೂಮಾನಂದ್ ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸುವುದರ ಜೊತೆಗೆ, ಸರ್ಕಾರದ ನಿಯಮಾನುಸಾರ 1 ಕೋಟಿ ರೂ. ಪರಿಹಾರ ನೀಡಬೇಕು. ಅವರ ಪತ್ನಿ ಗೌರಮ್ಮ ಅವರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಿ ಕುಟುಂಬದ ಜೀವನೋಪಾಯಕ್ಕೆ ನೆರವಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಶಿವಯೋಗಿ ಡಿ. ಹಡಗಿಲ್‌ಕರ್, ರಾಜ್ಯ ಸಂಯೋಜಕ ಹಾಗೂ ಕಲಬುರಗಿ ವಲಯ ಉಸ್ತುವಾರಿ ಎಲ್.ಆರ್. ಭೋಸಲೆ, ರಾಜ್ಯ ಕಾರ್ಯದರ್ಶಿಗಳಾದ ಡಾ. ಅನೀಲ ಟೇಂಗಳಿ, ತಿಪ್ಪಣ್ಣ ಎಂ. ಕಿನ್ನೂರ, ರಾಜ್ಯ ಸಮಿತಿ ಸದಸ್ಯ ಮೈಲಾರಿ ಶೆಳ್ಳಗಿ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.






