Kalaburagi | ಡಿವೈಡರ್ಗೆ ಬೈಕ್ ಢಿಕ್ಕಿ : ಯುವಕ ಸ್ಥಳದಲ್ಲೇ ಮೃತ್ಯು

ಮುಹಮ್ಮದ್ ಇಬ್ರಾಹಿಂ
ಶಹಾಬಾದ್: ರಸ್ತೆ ಮಧ್ಯದ ಡಿವೈಡರ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಶಹಾಬಾದ್ ಸಮೀಪ ರವಿವಾರ ಬೆಳಗ್ಗೆ ಸಂಭವಿಸಿದೆ.
ಮೃತ ಯುವಕನನ್ನು ಹಳೆ ಶಹಾಬಾದ್ ನಿವಾಸಿ ಮುಹಮ್ಮದ್ ಇಬ್ರಾಹಿಂ (22) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿರುವ ಸ್ನೇಹಿತ ಅಬ್ದುಲ್ ಹಕೀಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾಹಿತಿಯ ಪ್ರಕಾರ, ಮುಹಮ್ಮದ್ ಕಾಸಿಂ ಹಾಗೂ ಅಬ್ದುಲ್ ಹಕೀಮ್ ಇಬ್ಬರೂ ರಾವೂರಿನಿಂದ ಶಹಾಬಾದ್ ಕಡೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಮುಂಜಾನೆ ಸುಮಾರು 7 ಗಂಟೆ ವೇಳೆಗೆ ರಾವೂರ–ಮಾಲಗತ್ತಿ ಮಧ್ಯದ ರಾಜ್ಯ ಹೆದ್ದಾರಿ-150ರಲ್ಲಿ ಸಾಗುತ್ತಿದ್ದಾಗ ಏಕಾಏಕಿ ಪ್ರಾಣಿಯೊಂದು ಬೈಕ್ಗೆ ಅಡ್ಡ ಬಂದಿದೆ ಎನ್ನಲಾಗಿದೆ.
ಪ್ರಾಣಿಯನ್ನು ತಪ್ಪಿಸಲು ಯತ್ನಿಸಿದ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿದ್ದ ಡಿವೈಡರ್ಗೆ ಬಲವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಕಾಸಿಂ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹಿಂಬದಿ ಸವಾರನಾಗಿದ್ದ ಅಬ್ದುಲ್ ಹಕೀಮ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಕಾರ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಶಹಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.






