ಕಲಬುರಗಿ | ಬೈಕ್ ಕಳ್ಳತನ ಪ್ರಕರಣ : ಆರೋಪಿಯ ಬಂಧನ; 2.75 ಲಕ್ಷ ಮೌಲ್ಯದ 6 ಬೈಕ್ ವಶ

ಕಲಬುರಗಿ: ಕಲಬುರಗಿ ನಗರದ ವಿವಿಧ ಸ್ಥಳಗಳಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ 2.75 ಲಕ್ಷ ಮೌಲ್ಯದ 6 ಬೈಕ್ ವಶಕ್ಕೆ ಪಡೆಯುವಲ್ಲಿ ಇಲ್ಲಿನ ರಾಘವೇಂದ್ರ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೀದರ್ ನಗರ ನಿವಾಸಿ, ಚಾಸ್ಮೆ ವ್ಯಾಪಾರಿಯಾಗಿರುವ ಗುಲಾಮ ಅಲಿ ಫಾರುದ್ದೀನ ಝಾಫ್ರಿ(50) ಬಂಧಿತ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಖಾದ್ರಿ ಚೌಕ್ ನಿವಾಸಿ ಮುಹಮ್ಮದ್ ಜಾಫರ್ ಗಫೂರ್ ಎಂಬಾತರು ಆ.13 ರಂದು ನೀಡಿದ ದೂರಿನ ಮೇರೆಗೆ ರಾಘವೇಂದ್ರ ನಗರ ಠಾಣೆಯಲ್ಲಿ ಪೊಲೀಸರು ಗುನ್ನೆ ನಂ: 103/2025 ಕಲಂ 303(2) ಬಿ.ಎನ.ಎಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ತನಿಖಾ ತಂಡವನ್ನು ರಚಿಸಿ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದರು. ಕೊನೆಯಲ್ಲಿ ಆರೋಪಿಯನ್ನು ಶಂಕಿಸಿ, ಆತನನ್ನು ವಿಚಾರಣೆಗೆ ಒಳಪಡಿದಾಗ ಆತ ಬೈಕ್ ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.





