ಕಲಬುರಗಿ | ಬಿಜೆಪಿ ಶಾಸಕ ಡಾ.ಅವಿನಾಶ್ ಜಾಧವ್ ಅವರು ಸತ್ಯ ಅರಿತು ಮಾತನಾಡಲಿ : ರಾಘವೇಂದ್ರ ಗುತ್ತೇದಾರ

ಕಲಬುರಗಿ: ಚಿಂಚೋಳಿ ಮತಕ್ಷೇತ್ರದ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್ ಅವರು ಯಾವುದೇ ಹೇಳಿಕೆ ನೀಡುವ ಮೊದಲು ಸತ್ಯ ಅರಿತು ವಿವೇಚನೆಯಿಂದ ಹೇಳಿಕೆ ನೀಡುವುದನ್ನು ಕಲಿಯಲಿ, ಕಾಳಗಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಾಳಗಿ ತಾಲೂಕಾಧ್ಯಕ್ಷ ರಾಘವೇಂದ್ರ ಗುತ್ತೇದಾರ ತಿಳಿಸಿದ್ದಾರೆ.
ಕಾಳಗಿ ಪಟ್ಟಣದ ಪ್ರವಾಸಿ ಮುದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ್ ಅವರು ಕಾಳಗಿ ಪಟ್ಟಣದಲ್ಲಿ ಪ್ರಜಾ ಸೌಧ ಕಟ್ಟಡ ಕಾಮಗಾರಿ ಸ್ಥಗಿತ ಆಗಿದೆ ಎಂಬ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಇಂತಹ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುವ ಮೊದಲು ಅದರ ಬಗ್ಗೆ ತಿಳಿದು ಮಾತನಾಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರು ಮುತುವರ್ಜಿ ವಹಿಸಿ ಕಲಬುರಗಿ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವರಿಗೆ ಮನವರಿಕೆ ಮಾಡಿ ಪ್ರಜಾಸೌಧ ಕಟ್ಟಡಕ್ಕೆ ಅನುಮೋದನೆ ಪಡೆದಿರುತ್ತಾರೆ. ಅದ್ದರಿಂದ ಉಸ್ತುವಾರಿ ಸಚಿವರಿಂದ ಅಡಿಗಲ್ಲು ಮಾಡಿಸಬೇಕೆಂಬ ಇಚ್ಛೆಯಿಂದ ಸಚಿವರ ದಿನಾಂಕ ನಿಗದಿಯಾಗದ ಕಾರಣ ಕೆಲಸ ಮುಂದೂಡಲಾಗಿದೆ. ಇದರ ಅರಿವಿಲ್ಲದೆ ಶಾಸಕ ಡಾ.ಅವಿನಾಶ ಜಾಧವ್ ಅವರು ಪ್ರಜಾಸೌಧ ಸ್ಥಗಿತವಾಗಿದೆ ಎಂದು ಹೇಳಿರುವುದು ಸರಿಯಲ್ಲ ಎಂದು ಹೇಳಿದರು.
ಕಾಳಗಿ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ವೇದಪ್ರಕಾಶ ಮೋಟಗಿ, ಮುಖಂಡ ಸಂತೋಷ ಪತಂಗೆ ಮಾತನಾಡಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ ಡೊಣ್ಣೂರು, ಜಿಯಾವೋದ್ದಿನ ಸೌದಾಗರ್, ಪಪಂ ಸದಸ್ಯರಾದ ಶರಣಪ್ಪ ಬೇಲೂರು, ಬಸವರಾಜ ಮಡಿವಾಳ, ದತ್ತು ಗುತ್ತೇದಾರ, ಸಿದ್ರಾಮಪ್ಪ ಕಮಲಾಪೂರ, ಮೆಹಬೂಬ್ ಬೇಗ ಬಿಜಾಪೂರ, ಮುಖಂಡರಾದ ರವಿದಾಸ ಪತಂಗೆ, ಅಸ್ಲಾಂ ಬೇಗಂ ಬಿಜಾಪೂರ, ಸಂತೋಷ ಕಡಬೂರ, ತಾಯಪ್ಪ ದಂಡಗೋಳಕರ್, ರೇವಣಸಿದ್ದ ಕಲಶೆಟ್ಟಿ, ಬಸವರಾಜ ಕಲಶೆಟ್ಟಿ, ಸಂಗಮೇಶ ಬಡಿಗೇರ್, ವೀರಯ್ಯಸ್ವಾಮಿ ಮಠಪತ್ತಿ, ಸಿದ್ಧಲಿಂಗ ಗುತ್ತೇದಾರ, ಹೈದರ್ ಹರಸೂರ, ಅಮೃತರಾವ್ ಪಾಟೀಲ್, ರಾಜಕುಮಾರ ಗುತ್ತೇದಾರ, ಅವಿನಾಶ ಗುತ್ತೇದಾರ ಇತರರು ಇದ್ದರು.







