ಕಲಬುರಗಿ| ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ಪ್ರತಿಭಟನೆ

ಕಲಬುರಗಿ: ಚಿಂಚೋಳಿ ತಾಲೂಕಿನ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ, ಬಿಜೆಪಿ ವತಿಯಿಂದ ಶಾಸಕ ಡಾ.ಅವಿನಾಶ್ ಜಾಧವ್ ಅವರ ನೇತೃತ್ವದಲ್ಲಿ ಚಿಂಚೋಳಿ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಬಳಿಕ ತಹಶೀಲ್ದಾರ್ ವೆಂಕಟೇಶ ದುಗ್ಗನ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಡಾ. ಅವಿನಾಶ್ ಜಾಧವ್, ಪ್ರಸಕ್ತ ವರ್ಷದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ತೊಗರಿ, ಉದ್ದು, ಹೆಸರು ಸೇರಿದಂತೆ ಬಹುತೇಕ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಆದ್ದರಿಂದ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ರೈತರಿಗೆ ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ನಿಯಮಗಳ ಅನ್ವಯ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ತುರ್ತಾಗಿ ಪರಿಹಾರ ಧನ ಬಿಡುಗಡೆ ಮಾಡಬೇಕು. ಪ್ರಸ್ತುತ ಬಿಡುಗಡೆ ಮಾಡಿರುವ ಪರಿಹಾರ ಹಣವು ಯಾವುದಕ್ಕೂ ಸಾಕಾಗುವುದಿಲ್ಲ, ಇದು ಕೇವಲ ಕಣ್ಣೊರೆಸುವ ಕ್ರಮವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರ ತನ್ನ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಹೈನುಗಾರಿಕೆಗಾಗಿ ಪ್ರತಿ ಲೀಟರ್ ಹಾಲಿಗೆ ನೀಡುವ ಪ್ರೋತ್ಸಾಹ ಧನವನ್ನು ರೂ.5 ರಿಂದ ರೂ. 7ಕ್ಕೆ ಹೆಚ್ಚಿಸಬೇಕು. ಅಲ್ಲದೆ, ಬಾಕಿ ಉಳಿದಿರುವ 620 ಕೋಟಿ ರೂ. ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಬೆಳೆ ಹಾನಿಗೊಳಗಾದ ಎಲ್ಲಾ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ ರೂ. 25,000 ಪರಿಹಾರ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಮತ್ತು ಪರಿಹಾರ ನೀಡುತ್ತಿಲ್ಲ. ಬರಗಾಲದ ಸಂದರ್ಭದಲ್ಲೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಕಬ್ಬು ಬೆಳೆಗಾರರ ನಿರಂತರ ಹೋರಾಟಕ್ಕೆ ಸ್ಪಂದಿಸಿಲ್ಲ. ಈಗ ಮೆಕ್ಕೆಜೋಳ ಬೆಳೆದ ರೈತರೂ ಸಂಕಷ್ಟದಲ್ಲಿದ್ದು, ಸರಕಾರ ಕೂಡಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಒತ್ತಡ ಹೇರಿದರು.
ಈ ಪ್ರತಿಭಟನೆಯಲ್ಲಿ ವಿಜಯಕುಮಾರ್ ಚೆಂಗಟೆ, ಗೋಪಾಲರಾವ ಕಟ್ಟಿಮನಿ, ರಾಮರೆಡ್ಡಿ ಪಾಟೀಲ್, ಚಂದ್ರಶೇಖರ ಗುತ್ತೇದಾರ್, ರಮೇಶ್ ಪಡಶೇಟ್ಟಿ, ಕೆ.ಎಂ. ಬಾರಿ, ಲಕ್ಷ್ಮೀನರಸಿಂಹ ರೆಡ್ಡಿ, ಭೀಮಶೇಟ್ಟಿ ಮುರಡಾ, ಸಂತೋಷ ಗಡಂತಿ, ಶಿವಯೋಗಿ ರುಸ್ತಂಪೂರ್, ಹಣಮಂತ ಭೋವಿ, ಸಿದ್ದು ಪಡಶೆಟ್ಟಿ ಚಂದನಕೇರಾ, ಅಮರ ಲೋಡನೂರ್, ಆಕಾಶ ಕೋಳ್ಳೂರ್, ಪ್ರೇಮಸಿಂಗ್ ರಾಠೊಡ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.







