Kalaburagi | ಜೂನ್ 1ರಂದು ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ: ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ

ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ
ಕಲಬುರಗಿ: ಆಳಂದ ಪಟ್ಟಣದ ರಾಘವ ಚೈತನ್ಯ ಶಿವಲಿಂಗ ಮೂರ್ತಿ ಪೂಜೆಗೆ ಅಡ್ಡಿಪಡಿಸಿದ ಕೇಸ್ ವಾಪಸ್ಸು ಪಡೆದಿರುವುದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಜೂನ್ 1ರಂದು ಕಲಬುರಗಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಆಳಂದ ಪಟ್ಟಣದಲ್ಲಿ ರಾಘವ ಚೈತನ್ಯ ಶಿವಲಿಂಗ ಮೂರ್ತಿಗೆ ಪೂಜೆ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಆಗ ಕೇಂದ್ರದ ಸಚಿವರಾಗಿದ್ದ ಭಗವಂತ ಖೂಬಾ, ಆಂದೋಲಾ ಸಿದ್ದಲಿಂಗ ಸ್ವಾಮಿ ಸೇರಿ ಅದರಲ್ಲೂ ಜಿಲ್ಲಾಧಿಕಾರಿ ಕಾರಿನ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲೂ ತೂರಾಟ ನಡೆಸಿದ್ದರ ಹಿನ್ನೆಲೆಯಲ್ಲಿ 13 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 8 ಪ್ರಕರಣಗಳು ಸಚಿವರ, ಶಾಸಕರ ಹಾಗೂ ಇತರರ ಮೇಲೆ ಕಲ್ಲೂ ತೂರಾಟ ನಡೆಸಿದ್ದಲ್ಲದೇ ಮಾರಕಾಸ್ತ್ರದಿಂದ ಹಿಡಿದು ಭಯದ ವಾತಾವರಣ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ದಾಖಲಾಗಿದ್ದವು. 5 ಪ್ರಕರಣಗಳು ಖಾಸಗಿಯಾಗಿ ದಾಖಲಾಗಿದ್ದವು. ಆದರೆ ಸರ್ಕಾರ ಗೂಂಡಾಗಳಿಗೆ ಪ್ರಚೋದನೆ ನೀಡುವ ನಿಟ್ಟಿನಲ್ಲಿ ಅವರ ಮೇಲಿನ ಪ್ರಕರಣಗಳನ್ನು ವಾಪಸ್ಸು ಪಡೆದಿರುವುದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.
ಜೂನ್ 1ರಂದು ಬೆಳಿಗ್ಗೆ 9ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಬಿಜೆಪಿ ಪಕ್ಷದ ಇತರ ನಾಯಕರು ಹಾಗೂ ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಯ ಬಿಜೆಪಿ ಪಕ್ಷದ ಸಂಸದರು, ಮಾಜಿ ಸಂಸದರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿ ಇತರ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕೆಂದು ತಿಳಿಸಿದ್ದಾರೆ.




