ಕಲಬುರಗಿ | ಟವರ್ ಅಳವಡಿಕೆಗೆ ಮಧ್ಯವರ್ತಿಗಳಿಂದ ಬ್ಲ್ಯಾಕ್ಮೇಲ್ : ಇಬ್ಬರ ಬಂಧನ

ಸಾಂದರ್ಭಿಕ ಚಿತ್ರ | PC : freepik
ಕಲಬುರಗಿ: ವಡಾಫೋನ್ ಟವರ್ ಸ್ಥಾಪಿಸುವುದಾದರೆ ನಮಗೆ 1 ಲಕ್ಷ ರೂ. ನೀಡಬೇಕು, ಇಲ್ಲದಿದ್ದರೆ ಇದು ಅಕ್ರಮವಾಗಿ ಅಳವಡಿಕೆ ಮಾಡಲಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾ ಮೂಲಕ ಮಾನಹಾನಿ ಮಾಡಲಾಗುವುದು ಹಾಗೂ ನಡೆಯುತ್ತಿರುವ ಕೆಲಸವನ್ನು ಒಡೆದು ಹಾಳು ಮಾಡುತ್ತೇವೆ ಎಂದು ಜೀವ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಬ್ ಅರ್ಬನ್ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನಗರದ ಮಿಲ್ಲತ್ ನಗರದ ಖಾಲಿದ್ ಹಾಗೂ ಮುಬೀನ್ ಬಂಧಿತ ಆರೋಪಿಗಳಾಗಿದ್ದು, ಇನ್ನಿಬ್ಬರು ಆರೋಪಿಗಳಾದ ಸೂಫಿಯಾನ್ ಹಾಗೂ ಆರಿಫ್ ಎಂಬಾತರನ್ನು ಪತ್ತೆ ಹಚ್ಚಲು ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಮನಾಬಾದ್ ರಿಂಗ್ ರಸ್ತೆಯಲ್ಲಿರುವ ಪೀರ್ ಬಂಗಾಲಿ ದರ್ಗಾದ ಮುತವಲ್ಲಿ ಎಂದು ಹೇಳಲಾಗುತ್ತಿರುವ ಸೈಯದ್ ಅಮ್ಝಡ್ ಹುಸೈನ್ ಅವರು ನೀಡಿದ ದೂರಿನ ಮೇರೆಗೆ ಸಬ್ ಅರ್ಬನ್ ಠಾಣೆಯಲ್ಲಿ ಸೋಶಿಯಲ್ ಮೀಡಿಯಾ ವರದಿಗಾರ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೀರ್ ಬಂಗಾಲಿ ದರ್ಗಾದ ಕಾಂಪೌಂಡ್ ಒಳಗಡೆ ವಡಾಫೋನ್ ಟವರ್ ಸ್ಥಾಪನೆಯ ಕೆಲಸ ಕೆಲವು ತಿಂಗಳಿಂದ ನಡೆಯುತ್ತಿದ್ದು, ಟವರ್ ಅಳವಡಿಸಲು ಬಂದಿರುವ ಕಾರ್ಮಿಕರನ್ನು ಹಾಗೂ ನನ್ನನ್ನೂ ಕೂಡ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುತವಲ್ಲಿ ಸೈಯದ್ ಅಮ್ಝಡ್ ಹುಸೈನ್ ಅವರು ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇನ್ನಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







