Kalaburagi | ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಸ್ತನ್ಯಪಾನ ಅತ್ಯಗತ್ಯ: ರಾಹುಲ್ ಸಂಕನೂರ

ಕಲಬುರಗಿ : ನವಜಾತ ಶಿಶುಗಳ ಆರೋಗ್ಯಕರ ಬೆಳವಣಿಗೆ ಹಾಗೂ ಜೀವನಪೂರ್ತಿ ಉತ್ತಮ ಆರೋಗ್ಯಕ್ಕೆ ಆರಂಭಿಕ ವರ್ಷಗಳಲ್ಲಿನ ಸರಿಯಾದ ಪೋಷಣೆ ಮತ್ತು ಸೂಕ್ತ ಸ್ತನ್ಯಪಾನ ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಮಕ್ಕಳ ಚಿಕಿತ್ಸಾ ವಿಭಾಗದ ವತಿಯಿಂದ ಆಯೋಜಿಸಿದ್ದ 2026ರ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಬಾರಿಯ ಸ್ತನ್ಯಪಾನ ಸಪ್ತಾಹವನ್ನು “ಜೀವನದ ಸುಸ್ಥಿರ ಆರಂಭಕ್ಕಾಗಿ ಸ್ತನ್ಯಪಾನ ಪರಿಣಾಮಕಾರಿಯಾದುದನ್ನು ಬಲಪಡಿಸಿ” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮಗುವಿನ ಆರಂಭಿಕ ಹಂತದಲ್ಲೇ ಪೌಷ್ಟಿಕ ಆಹಾರ ಹಾಗೂ ಸೂಕ್ತ ಆರೈಕೆ ನೀಡುವುದು ಬಹಳ ಮುಖ್ಯ. ಹೊಸ ತಾಯಂದಿರಲ್ಲಿ ಕಂಡುಬರುವ ಭಯ ಹಾಗೂ ಗೊಂದಲಗಳನ್ನು ನಿವಾರಿಸಬೇಕು. ಸಮಾಜದಲ್ಲಿರುವ ಅವೈಜ್ಞಾನಿಕ ಆಚರಣೆಗಳು ಬೊಟುಲಿಸಮ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ತಾಯಂದಿರಿಗೆ ಮಗುವಿಗೆ ಹಾಲುಣಿಸುವ ಸರಿಯಾದ ವಿಧಾನಗಳ ಕುರಿತು ಅರಿವು ಮೂಡಿಸಬೇಕು. ಮಗುವಿನ ಅಳು ಕೇವಲ ಹಸಿವಿನಿಂದ ಮಾತ್ರ ಉಂಟಾಗುವುದಿಲ್ಲ ಎಂಬುದನ್ನು ಸಹ ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ಶಿಶು ಆರೈಕೆ ಕುರಿತ ಜಾಗೃತಿ ಅಭಿಯಾನವನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಮೇಲ್ವಿಚಾರಕರು, ಗ್ರಾಮ ಪಂಚಾಯಿತಿ ಪಿಡಿಒಗಳು ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಕಾರ್ಯಾಗಾರಗಳನ್ನು ಆನ್‌ಲೈನ್ ಹಾಗೂ ನೇರ ಪ್ರಸಾರದ ಮೂಲಕ ಜಿಲ್ಲೆಯಾದ್ಯಂತ ವಿಸ್ತರಿಸಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರಿಗೆ ನಿರಂತರ ಜಾಗೃತಿ ಮೂಡಿಸುವ ಸಮಗ್ರ ಯೋಜನೆ ರೂಪಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಸ್ತ್ರೀರೋಗ ತಜ್ಞೆ ಡಾ. ನಂದಿನಿ ಬೋಸ್ಗೆ ಅವರು ನವಜಾತ ಶಿಶುಗಳ ಆರೈಕೆ ಹಾಗೂ ಸ್ತನ್ಯಪಾನದ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಜಿಮ್ಸ್ ಆಸ್ಪತ್ರೆಯ ಶಿಶು ತಜ್ಞ ವಿಭಾಗದ ಮುಖ್ಯಸ್ಥ ಡಾ. ರೇವಣಸಿದ್ದಪ್ಪ ಭೋಸ್ಗಿ ಸ್ವಾಗತಿಸಿದರು.
ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಶರಣಪ್ಪ ಖ್ಯಾತನಾಳ, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಪಿಎಚ್‌ಸಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.






