Kalaburagi | ಟೈರ್ ಸ್ಫೋಟ: ಬಸ್ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಅಫಜಲಪುರ: ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಮುಂಭಾಗದ ಟೈರ್ ಏಕಾಏಕಿ ಸ್ಫೋಟಗೊಂಡರೂ, ಚಾಲಕನ ಸಮಯಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದ ಘಟನೆ ಅಫಜಲಪುರ ತಾಲೂಕಿನ ಅತನೂರ ಗ್ರಾಮದ ಸಮೀಪ ನಡೆದಿದೆ.
ಚಿತ್ತಾಪುರ ಸಾರಿಗೆ ಘಟಕಕ್ಕೆ ಸೇರಿದ ವಿಜಯಪುರ–ಮುಗಳಖೋಡ ಬಸ್ ಪ್ರಯಾಣಿಕರನ್ನು ಹೊತ್ತು ಅಫಜಲಪುರ ಮಾರ್ಗವಾಗಿ ಸಂಚರಿಸುತ್ತಿತ್ತು. ಅತನೂರ ಗ್ರಾಮದ ಸಮೀಪ ಬರುತ್ತಿದ್ದಂತೆ ಬಸ್‌ನ ಮುಂಭಾಗದ ಟೈರ್ ಭಾರಿ ಶಬ್ದದೊಂದಿಗೆ ಏಕಾಏಕಿ ಸ್ಫೋಟ ಆಗಿದೆ. ಟೈರ್ ಸ್ಫೋಟಗೊಂಡ ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಪಕ್ಕಕ್ಕೆ ವಾಲಿದೆ.
ಘಟನೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕಗೊಂಡು ಕಿರುಚಾಡಲು ಆರಂಭಿಸಿದರು. ಆದರೆ ಟೈರ್ ಬ್ಲಾಸ್ಟ್ ಆದ ಕ್ಷಣದಲ್ಲೇ ಚಾಲಕ ಸ್ಟೀರಿಂಗ್ ಮೇಲೆ ಬಿಗಿಯಾದ ನಿಯಂತ್ರಣ ಸಾಧಿಸಿ, ಬ್ರೇಕ್ ಅನ್ನು ಹಂತಹಂತವಾಗಿ ಪ್ರಯೋಗಿಸುವ ಮೂಲಕ ಬಸ್ ಅನ್ನು ಸುರಕ್ಷಿತವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳೀಯ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ, ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಯಲು ನೆರವಾದರು. ಬಳಿಕ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪ್ರಯಾಣಿಕರು ಅಫಜಲಪುರ ತಲುಪಲು ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.
ಹಳೆಯ ಟೈರ್‌ಗಳ ಬಗ್ಗೆ ಆಕ್ರೋಶ
ಈ ಘಟನೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸಂಚರಿಸುವ ಸಾರಿಗೆ ಬಸ್‌ಗಳ ಫಿಟ್‌ನೆಸ್, ನಿರ್ವಹಣೆ ಹಾಗೂ ಹಳೆಯ ಟೈರ್‌ಗಳ ಬದಲಾವಣೆ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಿ, ಹಳೆಯ ಹಾಗೂ ಅಪಾಯಕಾರಿ ಟೈರ್‌ಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






