ಕಲಬುರಗಿ | ಕ್ಯಾಮೆರಾ ತರಬೇತಿ ಶಿಬಿರ ; ಛಾಯಾರತ್ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ಕಲಬುರಗಿ ನಗರದ ಕನ್ನಡ ಭವನದಲ್ಲಿ ಸೋನಿ ಕ್ಯಾಮೆರಾ ಕಂಪೆನಿ ಹಾಗೂ ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ವಿಶೇಷ ಛಾಯಾಗ್ರಹಣ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮುಸ್ತಫಾ ಭಾಶಾ ಅವರು, ಸೋನಿ ಕ್ಯಾಮೆರಾಗಳ ತಾಂತ್ರಿಕ ವೈಶಿಷ್ಟ್ಯಗಳು, ಆಧುನಿಕ ಛಾಯಾಗ್ರಹಣ ತಂತ್ರಗಳು ಹಾಗೂ ವೃತ್ತಿಪರ ಛಾಯಾಗ್ರಾಹಕರಿಗೆ ಅಗತ್ಯವಾದ ಹೊಸ ತಂತ್ರಜ್ಞಾನಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪಡೆದ ಕಲಬುರಗಿಯ ಹಿರಿಯ ಛಾಯಾಗ್ರಾಹಕಿ ಜಯಶ್ರೀ ಗಂಗಾರಾಮ ರಾಠೋಡ ಹಾಗೂ ಆಳಂದದ ಹಿರಿಯ ಛಾಯಾಗ್ರಾಹಕ ಪ್ರಕಾಶ ಜಂಗ್ಲೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ ಅವರು ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಬುರಗಿ ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಸಿ. ತೋಟದ, ಛಾಯಾಗ್ರಾಹಕರು ನಿರಂತರವಾಗಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು ಎಂದು ಕರೆ ನೀಡಿದರು.
ತರಬೇತಿ ಕಾರ್ಯಕ್ರಮದ ನಂತರ ಅಸೋಸಿಯೇಷನ್‌ನ 2024-25 ಹಾಗೂ 2025-26ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಖಜಾಂಚಿ ಶ್ರೀನಿವಾಸ ಮಡಕಿ ಅವರು ಸಂಘದ ಲೆಕ್ಕಪತ್ರಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸೈಯದ್ ನಸಿರುದಿನ್ ಕೆ. ಪಟೇಲ್, ಕಾರ್ಯದರ್ಶಿ ಮಹಮ್ಮದ್ ಅಪ್ಸರ್ ಪಟೇಲ್, ಸಹ ಕಾರ್ಯದರ್ಶಿ ಅನೀಲಕುಮಾರ ಗಣೇಶಕರ್, ಖಜಾಂಚಿ ಶ್ರೀನಿವಾಸ ಮಡಕಿ, ಗೌರವ ಸಲಹೆಗಾರರಾದ ಚಂದ್ರಶೇಖರ್ ಬ್ಯಾಕೋಡ್, ಮಹಮ್ಮದ್ ಅಯಾಜುದ್ದೀನ್ ಪಟೇಲ್, ನಾಗೇಂದ್ರ ಸಕ್ಕರಗಿ, ನಾರಾಯಣ ಎಂ. ಜೋಶಿ, ಪ್ರಕಾಶ ಜಂಗ್ಲೆ, ಶ್ರೀಕಾಂತ್ ಎಸ್. ಪಾಟೀಲ್, ವಿಜಯಕುಮಾರ್ ರಾಠೋಡ್, ಫಿರೋಜ್ ಖಾನ್ ಹಮೀದ್, ಪ್ರಕಾಶ ಶೇರಖಾನೆ, ಅಭಿಲಾಷ ಸರಸಂಬಿ, ಸಿದ್ದು ಚೇಟ್ಟಿ, ಅಂಬಾದಾಸ್ ಗಾಯಕವಾಡ, ಆಕಾಶ್ ಪೂಜಾರಿ, ಸಿದ್ದರಾಮಯ್ಯ ಬೆಲ್ಲದಮಠ, ಮಲ್ಲಿಕಾರ್ಜುನ್ ತುಪ್ಪದಮಠ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಹಾಗೂ ನೂರಾರು ಛಾಯಾಗ್ರಾಹಕರು ಭಾಗವಹಿಸಿದ್ದರು.






