Kalaburagi | ವಿಬಿಜಿ ಗ್ರಾಮಜಿ ಯೋಜನೆ ರದ್ದುಪಡಿಸಿ, ಬಾಕಿ ಕೂಲಿ ಬಿಡುಗಡೆಗೆ ಆಗ್ರಹ

ಕಲಬುರಗಿ : ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಬಾಕಿ ಇರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಬರಪೀಡಿತ ಪ್ರದೇಶಗಳಲ್ಲಿ ಬರಗಾಲ ಕಾಮಗಾರಿಗಳನ್ನು ಆರಂಭಿಸಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಆಗ್ರಹಿಸಿದೆ.
ಈ ಸಂಬಂಧ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಪಿಆರ್‌ಎಸ್ ಕಾರ್ಯಕರ್ತರು ಸೋಮವಾರ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
‘ವಿಕ್ಷಿತ್ ಭಾರತ್–ಗ್ಯಾರಂಟಿ ಫಾರ್ ರೋಜ್‌ಗಾರ್’ (ವಿಬಿಜಿ ಗ್ರಾಮಜಿ) ಯೋಜನೆಯಡಿ ಗ್ರಾಮೀಣ ಜನರಿಗೆ ವರ್ಷಕ್ಕೆ 125 ದಿನಗಳ ಉದ್ಯೋಗ ನೀಡುವುದಾಗಿ ಸರ್ಕಾರ ಘೋಷಿಸಿದೆ. ಆದರೆ ಈಗಾಗಲೇ ಮೂರು–ನಾಲ್ಕು ವಾರಗಳಿಂದ ಕೆಲಸ ಮಾಡಿರುವ ಅನೇಕ ಕೂಲಿಕಾರರಿಗೆ ಇನ್ನೂ ವೇತನ ಪಾವತಿಯಾಗಿಲ್ಲ. ಬರಗಾಲದ ಸಂಕಷ್ಟದಲ್ಲಿರುವ ಬಡ ಕಾರ್ಮಿಕರಿಗೆ ಕೂಲಿ ಸಿಗದಿರುವುದು ಬದುಕನ್ನು ಮತ್ತಷ್ಟು ದುಸ್ತರಗೊಳಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬಾವಿ, ಕೊಳವೆಬಾವಿ ಹಾಗೂ ಹಳ್ಳ-ಕೊಳ್ಳಗಳು ಬತ್ತಿಹೋಗಿವೆ. ಪರಿಣಾಮ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಸರ್ಕಾರ ಸಮರ್ಪಕ ನೀರು ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಕಾಮಗಾರಿಗಳ ಹಾಜರಿ ಹಾಗೂ ಎಂಐಎಸ್ ದಾಖಲಾತಿಯಲ್ಲಿನ ಲೋಪಗಳಿಗೆ ಮೆಟ್‌ಗಳನ್ನೇ ಹೊಣೆಗಾರರನ್ನಾಗಿ ಮಾಡುವ ಕ್ರಮವನ್ನು ಕೈಬಿಡಬೇಕು. ಮೆಟ್‌ಗಳಿಂದ ಬಲವಂತವಾಗಿ ದೃಢೀಕರಣ ಪತ್ರ ಪಡೆಯುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಇಜಿಎ) ಅಡಿಯಲ್ಲಿ ಗ್ರಾಮಸಭೆಗಳ ಮೂಲಕ ಕಾಮಗಾರಿಗಳ ಕ್ರಿಯಾ ಯೋಜನೆ ರೂಪಿಸಲಾಗುತ್ತಿತ್ತು. ಆದರೆ ಹೊಸ ವಿಬಿಜಿ ಗ್ರಾಮಜಿ ಯೋಜನೆಯಿಂದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಅಧಿಕಾರ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಕೆಪಿಆರ್‌ಎಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.
ವಿಬಿಜಿ ಗ್ರಾಮಜಿ ಯೋಜನೆಯನ್ನು ರದ್ದುಪಡಿಸಿ, ಹಿಂದಿನ ಎಂಎನ್‌ಆರ್‌ಇಜಿಎ ಯೋಜನೆಯನ್ನು ಮುಂದುವರಿಸಬೇಕು. ಗ್ರಾಮೀಣ ಜನರಿಗೆ ಉದ್ಯೋಗ, ಸಮರ್ಪಕ ಕೂಲಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಖಾತ್ರಿಪಡಿಸುವ ಮೂಲಕ ಬರಗಾಲದ ಸಂಕಷ್ಟದಿಂದ ಜನರನ್ನು ರಕ್ಷಿಸಬೇಕು ಎಂದು ಕೆಪಿಆರ್‌ಎಸ್ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಾರ್ಯದರ್ಶಿ ಸಾಯಬಣ್ಣ ಗುಡುಬಾ, ಉಪಾಧ್ಯಕ್ಷರಾದ ಸುಭಾಷ್ ಜೇವರ್ಗಿ, ದೆವು ಬಂದಾರ, ಚಂದಪ್ಪ ಪೂಜಾರಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ಕೂಲಿ ಕಾರ್ಮಿಕರು ಭಾಗವಹಿಸಿದ್ದರು.






