ಕಲಬುರಗಿಯ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆಗೆ ʼಪದ್ಮಶ್ರೀʼ

ಡಾ.ವಿಜಯಲಕ್ಷ್ಮಿ ದೇಶಮಾನೆ
ಕಲಬುರಗಿ : ಕಲಬುರಗಿ ಮೂಲದ ಹಿರಿಯ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ 2025ರ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಖ್ಯಾತ ಕ್ಯಾನ್ಸರ್ ತಜ್ಞೆ ಎಂದು ಹೆಸರಾಗಿರುವ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು ಮೂಲತಃ ಕಲಬುರಗಿಯವರು. ತಂದೆ ಬಾಬುರಾವ್ ಸ್ವಾತಂತ್ಯ್ರ ಹೋರಾಟಗಾರರಾಗಿದ್ದರೆ, ತಾಯಿ-ರತ್ನಮ್ಮ ತರಕಾರಿ ಮಾರಾಟಗಾರರಾಗಿದ್ದರು. ಕಡುಬಡತನ ಮಧ್ಯೆ ಓದು ಮುಂದುವರಿಸಿದ ಅವರ ವಿದ್ಯಾಭ್ಯಾಸಕ್ಕೆ ಅವರ ತಾಯಿಯ ʼತಾಳಿʼ ಮಾರಿ ಶುಲ್ಕ ಕಟ್ಟಿದ್ದರು. ಈ ಮೂಲಕ ವಿಜಯಲಕ್ಷ್ಮಿ ಅವರು 1980ರಲ್ಲಿ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯಕೀಯ ಪದವಿ ಪಡೆದರು. ಬಳಿಕ 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.
1985ರಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಗೆ ಸೇರ್ಪಡೆಯಾದರು. 1989ರಲ್ಲಿ ಮುಂಬೈಯಿನ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ತರಬೇತಿ ನಂತರ ಅವರು, 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್ಎಐಎಸ್ ಫೆಲೋಶಿಪ್ಗೆ ಪಾತ್ರರಾದರು. ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ, ಮುಖ್ಯಸ್ಥೆ, ಸಂಸ್ಥೆಯ ನಿರ್ದೇಶಕಿಯಾಗಿಯೂ ಮಹತ್ವದ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಉಪಾಧ್ಯಕ್ಷೆಯಾಗಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂತರ್ರಾಷ್ಟ್ರೀಯ ವಲಯ ರಾಷ್ಟ್ರೀಯರತ್ನ, ಕೆಂಪೇಗೌಡ ಪ್ರಶಸ್ತಿ, ಮೆಡಿಕಲ್ ಎಕ್ಸಲೆನ್ಸ್ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, 1999ರ ವರ್ಷದ ಮಹಿಳಾ ಪ್ರಶಸ್ತಿ ಸೇರಿದಂತೆ ದೇಶ ವಿದೇಶಗಳಿಂದಲೂ ಇವರಿಗೆ ಪ್ರಶಸ್ತಿಗಳು ಒಲಿದುಬಂದಿವೆ.
ಅಮೆರಿಕ, ಸ್ವೀಡನ್, ಮುಂಬೈ, ಕೊಲಂಬೋಗಳಿಗೆ ಪ್ರತಿನಿಧಿಯಾಗಿ ಭೇಟಿ ನೀಡಿರುವ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರು, ರಾಷ್ಟ್ರ, ರಾಜ್ಯದ ಅನೇಕ ಪತ್ರಿಕೆ, ಮ್ಯಾಗಝೀನ್ ಗಳಲ್ಲಿ ಕ್ಯಾನ್ಸರ್ ಕುರಿತು ಹಲವಾರು ಲೇಖನಗಳನ್ನು ಬರೆದಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದು, ಇಂದು ಕ್ಯಾನ್ಸರ್ ರೋಗಕ್ಕೆ ತುತ್ತಾದ ರೋಗಿಗಳ ಸೇವೆಗಾಗಿ ತ್ಯಾಗ, ನಿಷ್ಠೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಕಳಕಳಿಯಿಂದ ಸೇವೆ ಸಲ್ಲಿಸುತ್ತಿರುವ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ ಅವರ ವೈದ್ಯಕೀಯ ಸೇವೆ ಗುರುತಿಸಿ, ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದೆ.







