Kalaburagi | ಖರ್ಗೆ ವೃತ್ತದ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

ಕಲಬುರಗಿ: ನಗರದ ಖರ್ಗೆ ವೃತ್ತದ ಬಳಿ ಕಾರೊಂದರಲ್ಲಿ ಬುಧವಾರ ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ.
ಕಾರಿನ ಮುಂಭಾಗದ ಬಾನೆಟ್ನಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಾರು ಹೊತ್ತಿ ಉರಿಯುತ್ತಿದ್ದ ದೃಶ್ಯ ಕಂಡು ಸ್ಥಳೀಯರು ಹಾಗೂ ವಾಹನ ಸವಾರರು ಆತಂಕಗೊಂಡರು. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರು ಘಟನಾ ಸ್ಥಳದತ್ತ ಧಾವಿಸಿ ಪರಿಸ್ಥಿತಿಯನ್ನು ಗಮನಿಸಿದರು.
ಖರ್ಗೆ ವೃತ್ತವು ನಗರದ ಪ್ರಮುಖ ವೃತ್ತಗಳಲ್ಲಿ ಒಂದಾಗಿದ್ದು, ಇಲ್ಲಿ ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನೆಂಬುದು ತಿಳಿದುಬಂದಿಲ್ಲ. ಘಟನೆಯಲ್ಲಿ ಕಾರು ಭಾಗಶಃ ಹಾನಿಗೊಳಗಾಗಿದೆ.
ಸ್ಥಳೀಯರು ಬೆಂಕಿಯನ್ನು ನಂದಿಸಿದ್ದಾರೆ. ಘಟನೆ ಎಂ.ಬಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Next Story




