ಕಲಬುರಗಿ | ಪಿಡಿಒ ಮೇಲೆ ಹಲ್ಲೆ ಪ್ರಕರಣ ; ಗ್ರಾಪಂ ಸದಸ್ಯಯ ಸದಸ್ಯತ್ವ ರದ್ದುಗೊಳಿಸಲು ಆಗ್ರಹ

ಕಲಬುರಗಿ : ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಗ್ರಾಪಂ ಕಚೇರಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ರತ್ನಮ್ಮ ಅವರ ಮೇಲೆ ಹಲ್ಲೆ ಮಾಡಿದ್ದ ಅದೇ ಗ್ರಾಮ ಪಂಚಾಯತ್ ಸದಸ್ಯೆ ಶಾಂತಮ್ಮ ಬಂಡಿ ಅವರ ಸದಸ್ಯತ್ವ ರದ್ದುಗೊಳಿಸಬೇಕೆಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಬಿ.ಗ್ರೆಡ್) ಹುದ್ದೆ ಉನ್ನತೀಕರಣ ಸಂಘದ ವತಿಯಿಂದ ಮನವಿ ಸಲ್ಲಿಸಿ ಆಗ್ರಹಿಸಿದರು.
ಮಂಗಳವಾರ ರಾಜ್ಯ ನಿದೇರ್ಶಕಿ ರಾಜೇಶ್ವರಿ ಸಾಹು ನೇತೃತ್ವದಲ್ಲಿ ಜಿ.ಪಂ. ಸಿಇಓ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಕಾರ್ಯದರ್ಶಿ ಉಮಾಮಹಾದೇವನ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿಗಳು ಸಂವಿಧಾನಬದ್ಧವಾಗಿ ರಚಿಸಲ್ಪಟ್ಟ ಸಂಸ್ಥೆಗಳಾಗಿದ್ದು, ಇವುಗಳಲ್ಲಿ ಕರ್ತವ್ಯ ನಿರ್ವವಹಿಸುತ್ತಿರುವ ನೌಕರರು ಸಂವಿಧಾನವು ನಮಗೆ ರಕ್ಷಣೆ ನೀಡುತ್ತದೆ ಎನ್ನುವ ಭಾವನೆಯಿಂದ ಕೆಲಸ ಮಾಡುತ್ತಾರೆ. ಗ್ರಾಮ ಪಂಚಾಯಿತಿಯಲ್ಲಿ ಲೋಕನೌಕರರಾಗಿ ಕಾರ್ಯನಿರ್ವಹಿಸುವ ಚುನಾಯಿತ ಪ್ರತಿನಿಧಿಗಳು ಸಂವಿಧಾನದಡಿಯಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಆದರೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇಮ್ಯಾಗೇರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ರತ್ನಮ್ಮ ಅವರ ಮೇಲೆ ಅದೇ ಗ್ರಾಮ ಪಂಚಾಯಿತಿ ಸದಸ್ಯರಾದ ಶಾಂತಮ್ಮ ಬಂಡಿ ಅವರು ಹಲ್ಲೆ ಮಾಡಿರುವುದು ಖಂಡನೀಯವಾಗಿದೆ ಎಂದರು.
ಈ ಘಟನೆಗಳು ಗ್ರಾಮ ಪಂಚಾಯಿತಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟು ಮಾಡುತ್ತವೆ ಮತ್ತು ಅವರ ಸುರಕ್ಷತೆಗೆ ಧಕ್ಕೆ ತರುತ್ತವೆ. ಮುಂದುವರೆದು ಶಾಂತಮ್ಮ ಬಂಡಿ ಅವರು ಚುನಾಯಿತ ಪ್ರತಿನಿಧಿಗಳಾಗಿ ತಮ್ಮ ಕರ್ತವ್ಯಕ್ಕೆ ತರವಲ್ಲದ ರೀತಿಯಲ್ಲಿ ವರ್ತಸಿ ಸಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ, ಹಲ್ಲೆ ಮಾಡಿ ಗೂಂಡಾ ವರ್ತನೆ ತೋರಿದ್ದಾರೆ ಹಾಗೂ ರಾಜ್ಯದಲ್ಲಿ ಇದುವರೆಗೂ 148ಕ್ಕೂ ಹೆಚ್ಚು ಪಿಡಿಒ ಅವರ ಮೇಲೆ ಪದೇ-ಪದೇ ಹಲ್ಲೆಯಂತಹ ಘಟನೆಗಳು ಜರುಗುತ್ತಿವೆ, ಇದರಿಂದ ಭಯದ ವಾತವಾರಣದಲ್ಲಿ ರಾಜ್ಯದಲ್ಲಿ ಪಿಡಿಒ ಅವರ ಕಾರ್ಯನಿರ್ವಹಿಸುವ ಸ್ಥಿತಿ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ಪಿಡಿಒ ಅವರ ಮೇಲೆ ಪದೇ-ಪದೇ ಹಲ್ಲೆಗಳು ನಡೆಯುತ್ತಿರುವುದು ತೀರಾ ಕಳವಕಾರಿಯಾಗಿದ್ದು. ಇದು ಒಂದು ಗಂಭೀರ ಸಮಸ್ಯೆಯಾಗಿದೆ, ಇದನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಹಲ್ಲೆ ಮಾಡಿದವರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಘ ಇಂತಹ ಘಟನೆಗಳ ವಿರುದ್ಧ ಬಲವಾಗಿ ನಿಲ್ಲುತ್ತದೆ ಮತ್ತು ಅಧಿಕಾರಿಗಳ ಸುರಕ್ಷತೆಗಾಗಿ ಹೋರಾಡುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅನಸೂಯಾ ಅಷ್ಟಗಿ, ಸಂಘಟನೆ ಕಾರ್ಯದರ್ಶಿ ಪಾರ್ವತಿ ಪೂಜಾರಿ, ಪ್ರವೀಣ ಹುಡಗಿ, ಶರ್ಫುದ್ದಿನ್, ಮಹಾನಂದಾ ಪಾಟೀಲ, ಸುನೀಲಕುಮಾರ, ಶರಣು ರಾಮದಾಸ್ ಸೇರಿದಂತೆ ತಾ.ಪಂ.ಸಿಬ್ಬಂದಿಗಳು ಇದ್ದರು.







