ಕಲಬುರಗಿ | ಸಿ.ಸಿ ರಸ್ತೆ ಕಾಮಗಾರಿ ಬಿಲ್ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ :ಇಬ್ಬರು ಅಧಿಕಾರಿಗಳ ಅಮಾನತು

ಸಾಂದರ್ಭಿಕ ಚಿತ್ರ
ಕಲಬುರಗಿ: ಸಿ.ಸಿ ರಸ್ತೆ ಕಾಮಗಾರಿಯ ಬಿಲ್ ಮಾಡುವುದಕ್ಕೆ ಕಮಿಷನ್ ಬೇಡಿಕೆ ಇಟ್ಟಿರುವ ಕುರಿತಾಗಿ ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಪಂಚಾಯತ್ ರಾಜ್ ಇಲಾಖೆಯ ಚಿತ್ತಾಪುರ ಉಪವಿಭಾಗದ ಕಿರಿಯ ಇಂಜಿನಿಯರ್ ಶ್ರೀಪಾದ್ ಬಾಪುರಾವ್ ಕುಲಕರ್ಣಿ ಹಾಗೂ ಗುಂಡಗುರ್ತಿ ಗ್ರಾಮದ ಪಿಡಿಓ ಮಂಜುಶ್ರೀ ಜಹಾಂಗೀರ್ ದಾರ ಅವರನ್ನು ಅಮಾನತುಗೊಳಿಸಿ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಭಂವರಸಿಂಗ ಮೀನಾ ಅವರು ಆದೇಶ ಹೊರಡಿಸಿದ್ದಾರೆ.
ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದ್ದ ಸಿಸಿ ರಸ್ತೆಗೆ ಇಬ್ಬರು ಅಧಿಕಾರಿಗಳು ಗುತ್ತಿಗೆದಾರ ಬಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ಸಿಇಓ ಅವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.





