Kalaburagi | ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ: ಬಾಲಕನಿಗೆ 4 ವರ್ಷ ಶಿಕ್ಷೆ

ಸಾಂದರ್ಭಿಕ ಚಿತ್ರ
ಕಲಬುರಗಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿವಿಧ ಕಾಯ್ದೆಗಳ ಅಡಿಯಲ್ಲಿ 4 ವರ್ಷಗಳ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.
2022ರ ಏಪ್ರಿಲ್ 25ರಂದು ಸಂಜೆ 4 ಗಂಟೆ ಸುಮಾರಿಗೆ ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ದೂರುದಾರರ 8 ಮತ್ತು 7 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ, 17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಒಬ್ಬ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾನೆ ಎಂದು ಪ್ರಕರಣ ದಾಖಲಾಗಿತ್ತು.
ಬಾಲಕಿಯರು ಚೀರಿಕೊಂಡಾಗ ಬಾಲಕ ಸ್ಥಳದಿಂದ ಪರಾರಿಯಾಗಿದ್ದ. ಬಳಿಕ ಬಾಲಕಿಯರು ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದರು. ಈ ಕುರಿತು ಬಾಲಕನ ಮನೆಗೆ ವಿಚಾರಿಸಲು ತೆರಳಿದಾಗ ದೂರುದಾರರು ಹಾಗೂ ಕುಟುಂಬದ ಸದಸ್ಯರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾನೆ ಎಂಬ ಆರೋಪವೂ ಪ್ರಕರಣದಲ್ಲಿತ್ತು.
ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾಧಿಕಾರಿ ಶೀಲವಂತ ಎಸ್.ಹೆಚ್. ಅವರು ತನಿಖೆ ನಡೆಸಿ ಐಪಿಸಿ ಕಲಂ 323, 354, 355, 341, 504, ಪೋಕ್ಸೊ ಕಾಯ್ದೆ-2012ರ ಕಲಂ 8 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕಲಂ 3(1)(r), 3(1)(s), 3(1)(w) ಅಡಿಯಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಸಾಕ್ಷ್ಯಾಧಾರಗಳು ಹಾಗೂ ಎರಡೂ ಕಡೆಯ ವಾದಗಳನ್ನು ಪರಿಶೀಲಿಸಿ, ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ರುಜುವಾತಾಗಿದೆ ಎಂದು ತೀರ್ಮಾನಿಸಿದರು.
ಪೋಕ್ಸೊ ಕಾಯ್ದೆಯ ಕಲಂ 8ರಡಿ 4 ವರ್ಷಗಳ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ, ಐಪಿಸಿ ಕಲಂ 323ರಡಿ 1 ವರ್ಷ ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಲಾಗಿದೆ. ಐಪಿಸಿ ಕಲಂ 355 ಮತ್ತು 504ರಡಿ ತಲಾ 2 ವರ್ಷಗಳ ಶಿಕ್ಷೆ ಹಾಗೂ ತಲಾ 2 ಸಾವಿರ ರೂ. ದಂಡ ವಿಧಿಸಲಾಗಿದೆ.
ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕಲಂ 3(1)(w)(1)ರಡಿ 6 ತಿಂಗಳ ಸರಳ ಕಾರಾಗೃಹ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಲಾಗಿದೆ.






