Kalaburagi | ಪತ್ನಿಗೆ ಕುಡಗೋಲಿನಿಂದ ಹಲ್ಲೆ ಪ್ರಕರಣ: ಪತಿಗೆ 3 ವರ್ಷ ಜೈಲು, 10 ಸಾವಿರ ರೂ. ದಂಡ

ಸಾಂದರ್ಭಿಕ ಚಿತ್ರ
ಕಲಬುರಗಿ: ಪತ್ನಿಯ ನಡತೆ ಬಗ್ಗೆ ಸಂಶಯಪಟ್ಟು ಜಗಳವಾಡಿ, ಕುಡಗೋಲಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದ ಪತಿಗೆ ನಗರದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮರಗುತ್ತಿ ಗ್ರಾಮದ ಮಹಾದೇವಪ್ಪ ತಂದೆ ಮಹಾರುದ್ರಪ್ಪ ಸಂಬಾಜಿ (52) ಶಿಕ್ಷೆಗೆ ಗುರಿಯಾದ ವ್ಯಕ್ತಿ.
2022ರ ಜನವರಿ 18ರಂದು ಮಹಾದೇವಪ್ಪ ತನ್ನ ಹೊಲದಲ್ಲಿ ಬೆಳೆದ ತೊಗರಿಯನ್ನು ಅಡತಿಗೆ ಹಾಕಿ ಹಣ ಪಡೆದುಕೊಂಡು, ಸಂಜೆ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ಪ್ರಿಯಾ ಅವರು ಸಂಸಾರದ ಖರ್ಚಿಗೆ ಹಣದ ಅಗತ್ಯವಿದ್ದು, ಹಣವನ್ನು ಮದ್ಯಕ್ಕೆ ವ್ಯಯಿಸದಂತೆ ಬುದ್ಧಿವಾದ ಹೇಳಿದ್ದರು.
ಇದರಿಂದ ಕೋಪಗೊಂಡ ಮಹಾದೇವಪ್ಪ ಪತ್ನಿಯೊಂದಿಗೆ ಜಗಳವಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಮನೆಯಲ್ಲಿದ್ದ ಕುಡಗೋಲಿನಿಂದ ಪತ್ನಿಯ ಮೂಗು, ತಲೆ, ಎಡ ಕಿವಿ, ಎಡ ಹೊಟ್ಟೆ ಹಾಗೂ ಎಡ ತೊಡೆಗೆ ಹಲ್ಲೆ ನಡೆಸಿ ರಕ್ತಗಾಯಗೊಳಿಸಿದ್ದ. ಸಾಕ್ಷಿದಾರರು ಮಧ್ಯಪ್ರವೇಶಿಸಿ ಗಾಯಗೊಂಡಿದ್ದ ಪ್ರಿಯಾರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಆರಕ್ಷಕ ಉಪನಿರೀಕ್ಷಕ ಭೀಮರಾಯ ಪಾಟೀಲ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎ.ವಿ. ಶ್ರೀನಾಥ ಅವರು ಲಭ್ಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ಐಪಿಸಿ ಕಲಂ 326ರಡಿ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಮೂರು ತಿಂಗಳ ಸರಳ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದ್ದಾರೆ.
ಅಲ್ಲದೆ, ಐಪಿಸಿ ಕಲಂ 506ರಡಿ ಆರು ತಿಂಗಳ ಸರಳ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗೆ ಅನ್ವಯಿಸಲಾಗಿದ್ದ ಐಪಿಸಿ ಕಲಂ 307ರ ಆರೋಪವನ್ನು ನ್ಯಾಯಾಲಯ ಕೈಬಿಟ್ಟಿದೆ.






