ಕಲಬುರಗಿ | ಜಾನುವಾರುಗಳಿಗೆ ಚರ್ಮಗಂಟು ರೋಗ : ದನಕರುಗಳಿಗೆ ಲಸಿಕೆ ಹಾಕಿಸಲು ಡಿಸಿ ಫೌಝಿಯಾ ತರನ್ನುಮ್ ಮನವಿ

ಕಲಬುರಗಿ: ನೆರೆಯ ಮಹಾರಾಷ್ಟ್ರದಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಗಡಿ ಭಾಗದ ಆಳಂದ, ಅಫಜಲಪುರ ಮತ್ತು ಕಲಬುರಗಿ ತಾಲ್ಲೂಕುಗಳ ದನಕರುಗಳಲ್ಲಿ ಸಹ ರೋಗದ ಲಕ್ಷಣಗಳು ಹೆಚ್ಚುತ್ತಿರುವುದರಿಂದ ರೈತರು ಆತಂಕಕ್ಕೀಡಾಗಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ರೈತರಿಗೆ ಮನವಿ ಮಾಡಿ, ದನಕರುಗಳನ್ನು ಸಮೀಪದ ಪಶು ಕೇಂದ್ರಗಳಿಗೆ ಕರೆದುಕೊಂಡು ಹೋಗಿ ತಕ್ಷಣ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚಿಸಿದ್ದಾರೆ.
1 ರಿಂದ 6 ತಿಂಗಳ ವಯಸ್ಸಿನ ದನಕರುಗಳಲ್ಲಿ ಈ ರೋಗ ಹೆಚ್ಚು ತೀವ್ರವಾಗಿ ಕಂಡುಬರುತ್ತದೆ. ದೇಹದ ಮೇಲೆ ಸಣ್ಣ ಗುಳ್ಳಿಗಳು ಮೂಡಿ, ಜಾನುವಾರುಗಳು ತೀವ್ರವಾಗಿ ಬಳಲುತ್ತವೆ. ಚರ್ಮಗಂಟು (Lumpy Skin Disease) ಒಂದು ವೈರಾಣು ರೋಗವಾಗಿದ್ದು, ಒಂದು ಪ್ರಾಣಿಯಿಂದ ಮತ್ತೊಂದು ಪ್ರಾಣಿಗೆ ವೇಗವಾಗಿ ಹರಡುವ ಸ್ವಭಾವ ಹೊಂದಿದೆ. ಆದ್ದರಿಂದ ರೋಗಪೀಡಿತ ಜಾನುವಾರುಗಳನ್ನು ಪ್ರತ್ಯೇಕವಾಗಿ ಕಟ್ಟುವುದು ಹಾಗೂ ಪಶುವೈದ್ಯರಿಂದ ತಕ್ಷಣ ಚಿಕಿತ್ಸೆ ಪಡೆಯುವುದು ಅಗತ್ಯವೆಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಒಂದು ಲಕ್ಷ ಲಸಿಕೆ ಸಂಗ್ರಹ ಮಾಡಲಾಗಿದ್ದು, ಹಂತ ಹಂತವಾಗಿ ಎಲ್ಲಾ ಗ್ರಾಮಗಳಲ್ಲಿ ಪಶು ವೈದ್ಯಕೀಯ ತಂಡದ ಮೂಲಕ ಲಸಿಕೆ ಹಾಕಲಾಗುತ್ತದೆ. ಒಂದು ತಿಂಗಳ ಮೇಲ್ಪಟ್ಟ ಎಲ್ಲಾ ದನಕರುಗಳಿಗೆ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶು ವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸಬಹುದು. ತುರ್ತು ಸಂದರ್ಭಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಜಾನುವಾರುಗಳ ಸಂಚಾರಿ ಚಿಕಿತ್ಸಾ ಘಟಕದ ಉಚಿತ ಸಹಾಯವಾಣಿ 1962 ಸಂಖ್ಯೆಗೆ ಕರೆ ಮಾಡಲು ಜಿಲ್ಲಾಧಿಕಾರಿಗಳು ರೈತರಿಗೆ ಮನವಿ ಮಾಡಿದ್ದಾರೆ.







