ಕಲಬುರಗಿ | ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆ :ಮೂವರು ಆರೋಪಿಗಳ ಬಂಧನ, 2.6 ಕೆಜಿ ಗಾಂಜಾ ವಶ

ಕಲಬುರಗಿ: ನಗರದ ಕಾಕಡೆ ಚೌಕ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ, 2.60 ಲಕ್ಷ ಮೌಲ್ಯದ 2 ಕೆಜಿ 600 ಗ್ರಾಂ ಗಾಂಜಾ, 2,100 ನಗದು ಹಾಗೂ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬಸೀರ ಹಸನ್ ಲದಾಫ್ (42), ಋತುಬುದ್ದೀನ್ ಮೈಬೂಬ ಶೇಖ್ (50) ಹಾಗೂ ಅಬ್ದುಲ್ ಗನಿ ಹಾಶೀಮ್ ಶೇಖ್ (41) ಎಂದು ಗುರುತಿಸಲಾಗಿದೆ. ಇವರು ಮೂಲತಃ ಮಹಾರಾಷ್ಟ್ರದ ಭಿವಂಡಿ ನಿವಾಸಿಗಳಾಗಿದ್ದಾರೆ. ಇವರು ಪ್ರಸ್ತುತ ಕಲಬುರಗಿ ನಗರದ ಕಾಕಡೆ ಚೌಕ ಸಮೀಪ ವಾಸವಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ನಡೆಸುತ್ತಿದ್ದರೆಂಬ ಮಾಹಿತಿ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ ಅವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರಾದ ಶಾಲೂ ಹಾಗೂ ಪ್ರವೀಣ್ ಹೆಚ್. ನಾಯಕ್ ಅವರ ಮಾರ್ಗದರ್ಶನದಲ್ಲಿ, ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಜೇಮ್ಸ್ ಮಿನೇಜಿಸ್ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಅರುಣಕುಮಾರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.






