ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ವರ್ಗಾವಣೆ

ಆರ್.ಅನಿತಾ
ಕಲಬುರಗಿ : ಕಲಬುರಗಿ ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಆರ್.ಅನಿತಾ ಅವರನ್ನು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಗೆ ವಿಶೇಷ ಕರ್ತವ್ಯಕ್ಕಾಗಿ ವರ್ಗಾಯಿಸಿ, ಕಾರಾಗೃಹ ಮತ್ತು ಸುಧಾರಣೆ ಸೇವಾ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ, ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರ ಪ್ರಭಾರವನ್ನು ಮುಂದಿನ ಆದೇಶದವರೆಗೆ ನಿರ್ವಹಿಸುವಂತೆ, ಬೆಂಗಳೂರಿನ ಪ್ರಧಾನ ಕಚೇರಿಯ ಮುಖ್ಯ ಅಧೀಕ್ಷಕ ಕೆ. ಸುರೇಶ್ ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಲಬುರಗಿ ಸೆಂಟ್ರಲ್ ಜೈಲು ಕೈದಿಗಳ ನಡುವಿನ ಹೊಡೆದಾಟ, ಜೈಲು ಅಧಿಕಾರಿಗಳ ವಿರುದ್ಧ ಲಂಚದ ಆರೋಪ, ಜೈಲಿನೊಳಗೆ ಕೈದಿಗಳಿಗೆ ದುಬಾರಿ ಮದ್ಯ ಮತ್ತು ಸಿಗರೇಟ್ಗಳ ರಾಜಾತಿಥ್ಯ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳ ಹಿನ್ನೆಲೆಯಲ್ಲಿ ನಿರಂತರವಾಗಿ ಸುದ್ದಿಯಲ್ಲಿತ್ತು.
ಈ ಅಕ್ರಮ ಚಟುವಟಿಕೆಗಳ ಕುರಿತು ವಿಸ್ತೃತ ತನಿಖೆ ನಡೆಸಲು, ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಪಿ.ವಿ. ಆನಂದ ರೆಡ್ಡಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸುವಂತೆ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದರು.
ಇದಲ್ಲದೆ, ಅಲೋಕ್ ಕುಮಾರ್ ಅವರು ಖುದ್ದಾಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.







