ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೈದಿಗಳು ಪರಾರಿಯಾದ ಪ್ರಕರಣ | ಕರ್ತವ್ಯ ಲೋಪ ಆರೋಪದಡಿ ಜೈಲಾಧಿಕಾರಿ, ಸಿಬ್ಬಂದಿ ಅಮಾನತು : ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪದ ಆರೋಪದಡಿ ಸಂಬಂಧಿಸಿದ ಜೈಲಾಧಿಕಾರಿ ಹಾಗೂ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ತಪ್ಪಿಸಿಕೊಂಡ ಕೈದಿಗಳನ್ನು ಪತ್ತೆಹಚ್ಚಲು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪರಿಣಾಮವಾಗಿ ಓರ್ವ ಕೈದಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ತಾವು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಲಾಖೆಯ ಎಲ್ಲಾ ವಿಭಾಗಗಳ ಪರಿಶೀಲನಾ ಸಭೆ ನಡೆಸಿ, ಅವುಗಳ ಬಲವರ್ಧನೆ ಮತ್ತು ಉನ್ನತೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಾರಾಗೃಹಗಳ ಸ್ಥಿತಿಗತಿ ಹಾಗೂ ಬಂಧಿಖಾನೆ ಸಿಬ್ಬಂದಿಯ ಕಾರ್ಯಕ್ಷಮತೆಯ ಸಮಗ್ರ ಪರಿಶೀಲನೆ ನಡೆಸಲಾಗುವುದು. ಜೈಲುಗಳ ಸುಧಾರಣೆ, ಭದ್ರತಾ ವ್ಯವಸ್ಥೆಯ ಉನ್ನತೀಕರಣ ಮತ್ತು ಅಕ್ರಮಗಳಿಗೆ ಕಡಿವಾಣ ಹಾಕಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡಿರುವ ಅವರು, “ಟೀಕೆ ಮಾಡುವ ಬಿಜೆಪಿ ನಾಯಕರು ತಮ್ಮ ಆಡಳಿತಾವಧಿಯ ಜೈಲುಗಳ ಸ್ಥಿತಿಯನ್ನು ಒಮ್ಮೆ ಅವಲೋಕಿಸಬೇಕು. 2010ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಜಿಲ್ಲಾ ಕಾರಾಗೃಹದಿಂದ 8 ಕೈದಿಗಳು ಪರಾರಿಯಾಗಿದ್ದರು. ಅದು ರಾಜ್ಯದ ಇತಿಹಾಸದಲ್ಲೇ ದೊಡ್ಡ ಜೈಲು ಪರಾರಿ ಪ್ರಕರಣಗಳಲ್ಲಿ ಒಂದಾಗಿತ್ತು. ಆಗ ಅದನ್ನು ಗೃಹ ಸಚಿವರ ವೈಫಲ್ಯ ಎಂದು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
ಅಲ್ಲದೆ, ಬಿಜೆಪಿ ಆಡಳಿತದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ‘ಅತಿಥಿ ಗೃಹ’ದಂತಾಗಿ ಕೈದಿಗಳಿಗೆ ಸಕಲ ಸೌಲಭ್ಯಗಳು ದೊರೆಯುತ್ತಿದ್ದ ಸುದ್ದಿಗಳನ್ನು ರಾಜ್ಯ ಕಂಡಿದೆ. ಅದನ್ನೂ ಬಿಜೆಪಿ ತನ್ನ ವೈಫಲ್ಯವೆಂದು ಒಪ್ಪಿಕೊಳ್ಳುತ್ತಾರಾ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.






