ಕಲಬುರಗಿ | ಕರ್ನಾಟಕದ ಕೇಂದ್ರೀಯ ವಿವಿ ಪ್ರವೇಶಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಅಹ್ವಾನ

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ(ಸಿಯುಕೆ) 2026-27ನೇ ಸಾಲಿನ ವಿವಿಧ ಸ್ನಾತಕ ಕೋರ್ಸ್ ಗಳ ಪ್ರವೇಶಾತಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗೆ(ಸಿಯುಇಟಿ) ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಹೇಳಿದ್ದಾರೆ.
ಕೇಂದ್ರೀಯ ವಿವಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.3ರಂದು ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಶುಲ್ಕ ಹಾಗೂ ಅರ್ಜಿ ಸಲ್ಲಿಕೆಗೆ ಜ.31 ಕೊನೆಯ ದಿನವಾಗಿದೆ. ಫೆ.2 ರಿಂದ 4ರ ನಡುವೆ ಅರ್ಜಿಯ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ಮೇ 11ರಿಂದ 31 ರ(ತಾತ್ಕಾಲಿಕ) ತಾರೀಖಿನೊಳಗೆ ರಾಜ್ಯದಾದ್ಯಂತ 15 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ, ಪರೀಕ್ಷಾ ನಗರ, ಪ್ರವೇಶ ಪತ್ರ, ಕೀ ಉತ್ತರ ಹಾಗೂ ಫಲಿತಾಂಶಗಳನ್ನು ನಂತರ ಎನ್‌ಟಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.
ಕಂಪ್ಯೂಟರ್ ಆಧಾರಿತ ನಡೆಯುವ ಈ ಪರೀಕ್ಷೆಯು ಭಾರತೀಯ 13 ಭಾಷೆಗಳಲ್ಲಿ (ಇಂಗ್ಲಿಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಓಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗುವುದು. ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಶೇ.8ರಷ್ಟು ಮೀಸಲಾತಿ ಕೋಟಾದಡಿ ಪ್ರವೇಶ ನೀಡಲಾಗುತ್ತಿದೆ, ಇದರ ಸದುಪಯೋಗ ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿವಿಯಲ್ಲಿ ಪ್ರಸ್ತುತ ಬಿ.ಟೆಕ್ (ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ – ಎಐ & ಎಂಎಲ್, ಗಣಿತ ಮತ್ತು ಕಂಪ್ಯೂಟಿoಗ್, ಕಂಪ್ಯೂಟರ್ ಸೈನ್ಸ್), ಬಿಎಸ್ಸಿ (ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂಗೋಳ, ಭೂವಿಜ್ಞಾನ, ಮನೋವಿಜ್ಞಾನ), ಬಿಬಿಎ, ಸಮಾಜ ಕಾರ್ಯ (ಬಿಎಸ್‌ಡಬ್ಲ್ಯೂ), ಬಿಎ (ಅರ್ಥಶಾಸ್ತ್ರ, ಇತಿಹಾಸ, ಇಂಗ್ಲಿಷ್) ಹಾಗೂ ಐದು ವರ್ಷದ ಇಂಟಿಗ್ರೇಟೆಡ್ ಬಿಎ ಎಲ್‌ಎಲ್‌ಬಿ ಸೇರಿದಂತೆ ಒಟ್ಟು 15 ಆನರ್ಸ್ ಕೋರ್ಸ್ ಗಳನ್ನು ನಡೆಸುತ್ತಿದೆ ಎಂದು ಕುಲಪತಿ ಮಾಹಿತಿ ನೀಡಿದರು.
ಒಬ್ಬ ಅಭ್ಯರ್ಥಿ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಅರ್ಜಿಯಲ್ಲಿ ಸ್ವಂತ ಅಥವಾ ಪೋಷಕರ ಇ-ಮೇಲ್ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿದ್ದು, ಎಲ್ಲ ಮಾಹಿತಿ ಇ-ಮೇಲ್ ಅಥವಾ ಎಸ್‌ಎಂಎಸ್ ಮೂಲಕ ಮಾತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಅವರು ಸಿಯುಕೆ ಶೈಕ್ಷಣಿಕ ಸಾಧನೆ ಮತ್ತು ಪ್ರಗತಿಯ ಬಗ್ಗೆ ವಿವರಣೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣಾ, ಪ್ರೊ.ಹನುಮೇಗೌಡ, ಪ್ರೊ.ಹೆಗಡಿ, ಸಹಾಯಕ ಸಂಪರ್ಕಾಧಿಕಾರಿ ಪ್ರಕಾಶ ಬಾಳಿಕಾಯಿ, ಡಾ.ಟಿ.ಎಸ್. ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೂಕರ್ ವಿಜೇತೆ ದೀಪಾ ಬಾಸ್ತಿ ಕಾರ್ಯಕ್ರಮ ರದ್ದು: ಕುಲಪತಿ ಸ್ಪಷ್ಟನೆ
ಕಳೆದ ಡಿಸೆಂಬರ್ ತಿಂಗಳಲ್ಲಿ ಕೇಂದ್ರೀಯ ವಿವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಬೂಕರ್ ವಿಜೇತೆ ದೀಪಾ ಬಾಸ್ತಿ ಅವರಿಗೆ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮ ನಡೆಯುವುದಕ್ಕಿಂತ ಮುಂಚೆನೇ ನಿಯೋಜಿಸಿದ ಕಾರ್ಯಕ್ರಮ ರದ್ದುಪಡಿಸಲಾಗಿತ್ತು. ಈ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು, ಆ ವೇಳೆಯಲ್ಲಿ ಪರೀಕ್ಷೆಗಳು ನಡೆಯುತ್ತಿದ್ದವು. ಅದರಲ್ಲಿ ವಿವಿಯಲ್ಲಿ ನಡೆಸುವ ಕಾರ್ಯಕ್ರಮಕ್ಕೆ ಪೂರ್ವಾನುಮತಿ ಕೋರದೆ ಆಯೋಜಿಸಲಾಗಿತ್ತು. ಹಾಗಾಗಿ ಅದನ್ನು ತಡೆಹಿಡಿಯಲಾಗಿತ್ತು ಎಂದು ಸ್ಪಷ್ಟನೆ ಕೊಟ್ಟರು.







