ಕಲಬುರಗಿ | ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಂಡ ಸಿಬ್ಬಂದಿಗಳಿಗೆ ಆದೇಶ ಪತ್ರ ವಿತರಿಸಿದ ಸಿಇಓ ಭಂವರ್ ಸಿಂಗ್ ಮೀನಾ

ಕಲಬುರಗಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಇದೇ ಪ್ರಪ್ರಥಮ ಬಾರಿಗೆ ಕೌನ್ಸಿಲಿಂಗ್ ಮೂಲಕ ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ವರ್ಗಾವಣೆಗೊಂಡ ಸಿಬ್ಬಂದಿಯರಿಗೆ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಅವರು ಆದೇಶ ಪತ್ರಗಳನ್ನು ವಿತರಿಸಿದರು.
ಸರ್ಕಾರದ ಆದೇಶದಂತೆ ವಿಶೇಷ ಪ್ರಕರಣಗಳಾದ ಒಂಟಿ ಮಹಿಳೆ, ಒಂಟಿ ಪುರುಷ, ಗಂಭಿರ ಅನಾರೋಗ್ಯದ ಪ್ರಕರಣಗಳು ಹಾಗೂ ಅಂಗವಿಕಲತೆಯ ಮಾನದಂಡದಡಿ ಗ್ರೇಡ್-1 ಕಾರ್ಯದರ್ಶಿ, ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸಿಬ್ಬಂದಿಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ನಡೆಸಲಾಯಿತು.
ಈ ಕೌನ್ಸಿಲಿಂಗ್ ನಲ್ಲಿ ತಲಾ ಇಬ್ಬರು ಗ್ರೇಡ್-1 ಕಾರ್ಯದರ್ಶಿ, ಗ್ರೇಡ್-2 ಕಾರ್ಯದರ್ಶಿ ಹಾಗೂ ಇಬ್ಬರು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳ ಕೋರಿಕೆ ವರ್ಗಾವಣೆಯನ್ನು ಸಿಬ್ಬಂದಿಗಳ ಸಮಕ್ಷಮದಲ್ಲಿಯೇ ನೌಕರರು ಕೋರಿರುವ ಖಾಲಿ ಇರುವ ಗ್ರಾಮ ಪಂಚಾಯತಿಗಳಿಗೆ ತಮ್ಮ ಸ್ವ-ಇಚ್ಛೆಯಂತೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಯಿತು.
ಸಾಮಾನ್ಯ ಕೋರಿಕೆ ವರ್ಗಾವಣೆ ಹಾಗೂ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಕಡ್ಡಾಯ ವರ್ಗಾವಣೆ ಕ್ರಮವಾಗಿ ಇದೇ ಜು.28 ಮತ್ತು 29 ರಂದು ನಡೆಸಲಾಗುವುದು ಎಂದು ಸಿಇಓ ಭಂವರ್ ಸಿಂಗ್ ಮೀನಾ ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಸಿ.ಪಿ.ಓ ಎಸ್.ಎಸ್.ಮಠಪತಿ ಉಪಸ್ಥಿತರಿದ್ದರು.







