ಕಲಬುರಗಿ | ಚಾಮನೂರು ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ; 50,000 ರೂ. ದಂಡ

ಸಾಂದರ್ಭಿಕ ಚಿತ್ರ
ಕಲಬುರಗಿ: ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮನೂರು ಗ್ರಾಮದಲ್ಲಿ 2022ರಲ್ಲಿ ನಡೆದ ಕೊಲೆ ಪ್ರಕರಣದ ಅಪರಾಧಿ ಯಂಕಪ್ಪ ಅಲಿಯಾಸ್ ಯಂಕಣ್ಣ ದ್ಯಾವಪ್ಪ ಮಾಲಗತ್ತಿ (24)ಗೆ ಕಲಬುರಗಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಚಾಮನೂರು ಗ್ರಾಮದ ಯುವತಿ ಹಾಗೂ ಅದೇ ಗ್ರಾಮದ ಸೂರ್ಯಕಾಂತ ನಡುವಿನ ಪ್ರೇಮ ಸಂಬಂಧದಿಂದ ಉಂಟಾದ ಕುಟುಂಬ ವೈಮನಸ್ಸು ಕೊಲೆಗೆ ಕಾರಣವಾಗಿತ್ತು. ಯುವತಿಗೆ ಶಹಾಪುರ ತಾಲೂಕಿನ ಯುವಕನೊಂದಿಗೆ ವಿವಾಹವಾಗಿದ್ದರೂ, ಬಳಿಕ ಸೂರ್ಯಕಾಂತ ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಮರುಮದುವೆಯಾಗಿದ್ದ. ಈ ಬೆಳವಣಿಗೆಯಿಂದ ಎರಡು ಕುಟುಂಬಗಳ ನಡುವೆ ತೀವ್ರ ದ್ವೇಷ ಉಂಟಾಗಿದ್ದು, ರಾಜಿ ಪಂಚಾಯತಿಯಲ್ಲಿ ವೈಮನಸ್ಸು ಶಮನವಾಗುವವರೆಗೆ ಊರಿಗೆ ಬರದಂತೆ ಸೂಚಿಸಲಾಗಿತ್ತು.
ಆದರೆ, 2022ರ ಜೂನ್ 1ರಂದು ಮಗುವಿನ ತೊಟ್ಟಿಲು ಕಾರ್ಯಕ್ರಮಕ್ಕಾಗಿ ಊರಿಗೆ ಬಂದ ವೇಳೆ ಎರಡೂ ಕುಟುಂಬಗಳ ನಡುವೆ ಜಗಳ ಸಂಭವಿಸಿತು. ಈ ವೇಳೆ ಕೊಡಲಿ ಹಾಗೂ ಬಡಿಗೆಯಿಂದ ನಡೆದ ಹಲ್ಲೆಯಲ್ಲಿ ಸೂರ್ಯಕಾಂತ ಕುಟುಂಬದ ದಶರಥ್ ಮೃತಪಟ್ಟಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಪ್ರಭಾರಿ ಸರ್ಕಾರಿ ಅಭಿಯೋಜಕ ಎಸ್.ಆರ್. ನರಸಿಂಹಲು ವಾದ ಮಂಡಿಸಿದ್ದರು.






