ಕಲಬುರಗಿ| ಶಿಕ್ಷಕರಿಗೆ ಬೋಧಕೇತರ ಜವಾಬ್ಧಾರಿ ನೀಡುವುದು ಶಾಲೆಗಳ ದಾಖಲಾತಿ ಕುಸಿತಕ್ಕೆ ಕಾರಣ: ಚಂದ್ರಕಲಾ ಬಿದರಿ

ಕಲಬುರಗಿ: ‘ಸರಕಾರಿ ಶಾಲಾ ಶಿಕ್ಷಕರಿಗೆ ಪಾಠ ಬೋಧಿಸುವುದರ ಜೊತೆಯಲ್ಲೇ ಗಣತಿ, ಬಿಸಿಯೂಟ ನಿರ್ವಹಣೆಯಂತಹ ಕೆಲಸಗಳನ್ನೂ ಕೊಡುತ್ತಿರುವುದರಿಂದ ಸಂಪೂರ್ಣವಾಗಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕರಿಗೆ ಸಾಧ್ಯವಾಗುತ್ತಿಲ್ಲ. ಸರಕಾರಿ ಶಾಲೆಗಳ ದಾಖಲಾತಿ ಕುಸಿಯಲು ಇದೂ ಒಂದು ಪ್ರಮುಖ ಕಾರಣವಾಗಿದೆ ಎಂದು ಸಾಹಿತಿ ಚಂದ್ರಕಲಾ ಬಿದರಿ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ನಗರದಲ್ಲಿ ರವಿವಾರ ಆಯೋಜಿಸಿದ್ದ ರಾಜ್ಯದ ಸರಕಾರಿ ಶಾಲೆಗಳ ವಿಲೀನ ಕುರಿತ ಸಂವಾದದಲ್ಲಿ ಮಾತನಾಡಿದ ಚಂದ್ರಕಲಾ ಬಿದರಿ, ಸರಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುವುದರಿಂದ ಶಿಕ್ಷಕರಿಗೆ ಸರಕಾರಿ ಹುದ್ದೆಗಳು ಸಿಗದಂತಾಗುತ್ತವೆ. ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುವ ಪೋಷಕರ ಪಾತ್ರವೂ ಸರಕಾರ ಇಂತಹ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣವಾಗಿದೆ. ಶಾಲೆಯಲ್ಲಿ ಅಗತ್ಯವಿರುವಷ್ಟು ಮಕ್ಕಳಿದ್ದರೆ ಸರಕಾರ ಶಾಲೆಗಳನ್ನು ಉಳಿಸಬಹುದು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಮೇಶ ಲಂಡನಕರ್ ಮಾತನಾಡಿ, ಕಡಿಮೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ ಎಂಬ ಕಾರಣಕ್ಕಾಗಿ ರಾಜ್ಯದ ಆರು ಸಾವಿರ ಶಾಲೆಗಳನ್ನು ವಿಲೀನ ಮಾಡುವ ತೀರ್ಮಾನದಿಂದ ಬಡವರು, ರೈತರು, ಆದಿವಾಸಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದರಿಂದ ಎಂದಿಗೂ ಸರಿಪಡಿಸಲಾಗದ ಆರ್ಥಿಕ ಅಸಮಾನತೆ ಉಂಟಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಡಿಸಿದರು.
‘ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ಕೋಮು ಗಲಭೆ, ಜಾತೀಯತೆಯಂತಹ ಸಮಸ್ಯೆಗಳನ್ನು ಎದುರಿಸಲು ಶಿಕ್ಷಣ ಪಡೆಯುವುದು ಅತ್ಯವಶ್ಯಕವಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ದೇಶದ ಹಲವೆಡೆ ಅನಕ್ಷರತೆ ತಾಂಡವವಾಡುತ್ತಿರುವುದು ದುರದೃಷ್ಟಕರ ಸಂಗತಿ. ಶಾಲೆಗಳ ವಿಲೀನವನ್ನು ಕೈಬಿಟ್ಟು ಮಕ್ಕಳು ಶಾಲೆಗಳಿಗೆ ಏಕೆ ಬರುತ್ತಿಲ್ಲ ಎಂಬುದನ್ನು ಗಂಭೀರವಾಗಿ ಯೋಚಿಸಬೇಕಿದೆ ಎಂದರು.
‘ಕೇಂದ್ರ ಸರಕಾರ ಜಾರಿಗೊಳಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮನುಷ್ಯನಿಗೆ ಬೇಕಾದ ಪರಿಪೂರ್ಣ ಶಿಕ್ಷಣ ಸಿಕ್ಕಂತಾಗುವುದಿಲ್ಲ. ಅದರಲ್ಲಿ ತಂತ್ರಜ್ಞಾನ ಆಧರಿತ ಕೌಶಲಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ, ಮನುಷ್ಯನಲ್ಲಿ ಮೌಲ್ಯಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ.ಎನ್. ರಾಜಶೇಖರ್ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ 20 ಸಾವಿರಕ್ಕೂ ಹೆಚ್ಚು ಬೋಧಕರ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಆಸಕ್ತಿ ತೋರದೆ ಸರಕಾರ ಫಲಿತಾಂಶ ಸುಧಾರಣೆಯಾಗಬೇಕು ಎಂದರೆ ಹೇಗೆ? ಶಾಲಾ ಕಟ್ಟಡಗಳಿಗೆ ಆಸಕ್ತಿ ತೋರಿಸುವ ಸರಕಾರ, ಶಿಕ್ಷಕರ ನೇಮಕಾತಿಗೆ ಏಕೆ ಆಸಕ್ತಿ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ವೇದಿಕೆಯ ಮೇಲೆ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪೂರ, ಜಿಲ್ಲಾ ಸಂಘಟಕಿ ಅಶ್ವಿನಿ ಉಪಸ್ಥಿತರಿದ್ದರು.







