Kalaburagi | ಕೊಂಚೂರು ಡಿಗ್ಗಿ ತಾಂಡಾ ಗುಂಡಿಗೆ ಬಿದ್ದು ಮಗು ಸಾವನಪ್ಪಿದ ಪ್ರಕರಣ : ಅಕ್ರಮ ಗಣಿಗಾರಿಕೆ ನಡೆದಿಲ್ಲ,ಇಲಾಖೆ ಸ್ಪಷ್ಟನೆ

ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊಂಚೂರು ಡಿಗ್ಗಿ ತಾಂಡಾ ಬಳಿಯ ಹೊಂಡದಲ್ಲಿ ಮಗು ಬಿದ್ದು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಗಣಿಗಾರಿಕೆಯಿಂದ ದುರ್ಘಟನೆ ಸಂಭವಿಸಿದೆ ಎಂಬ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಹಾಗೂ ಕಲಬುರಗಿ ದಕ್ಷಿಣ ಉಪವಿಭಾಗದ ಎಸಿಪಿ ಎಸ್.ಎಚ್. ಸುಬೇದಾರ ಸ್ಪಷ್ಟನೆ ನೀಡಿದ್ದಾರೆ.
ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದ ಸರ್ವೆ ನಂ. 99/*/2ರಲ್ಲಿ ಐದು ಎಕರೆ ಪಟ್ಣಾ ಜಮೀನಿನಲ್ಲಿ ಮುರಂ ತೆರವುಗೊಳಿಸಲು ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ-1994ರ ತಿದ್ದುಪಡಿ ನಿಯಮಗಳು-2020ರ ನಿಯಮ 3A(b) ಅನ್ವಯ 2022ರ ಫೆಬ್ರವರಿ 17ರಂದು ಸಂಬಂಧಪಟ್ಟ ಹಿಡುವಳಿದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾರ್ಯದೇಶ ನೀಡಿದೆ ಎಂದು ತಿಳಿಸಿದ್ದಾರೆ.
ಅದರಂತೆ ಹಿಡುವಳಿದಾರರು ಜಮೀನಿನಿಂದ 60,700 ಮೆಟ್ರಿಕ್ ಟನ್ ಮುರಂ ಸಾಗಾಣಿಕೆ ಮಾಡಲು ಕೆಎಂಎಂಸಿಆರ್-1994ರ ಶೆಡ್ಯೂಲ್-II ಅನ್ವಯ ರಾಜಧನ 24.28 ಲಕ್ಷ ರೂ., ಡಿಎಂಎಫ್ 2.42 ಲಕ್ಷ ರೂ. ಸೇರಿದಂತೆ ಇತರೆ ಶುಲ್ಕ ಪಾವತಿಸಿ ಒಟ್ಟು 38.84 ಲಕ್ಷ ರೂ. ಸರ್ಕಾರಕ್ಕೆ ಸಲ್ಲಿಸಿದ್ದಾರೆ ಎಂದು ವಿವರಿಸಿದ್ದಾರೆ.
ಸದ್ಯ ಸದರಿ ಮುರಂ ಉಪಖನಿಜವನ್ನು ಸಮೀಪದ ರೈಲ್ವೆ ಲೈನ್ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುತ್ತಿದ್ದು, ಸ್ಥಳದಲ್ಲಿ ತಂತಿಬೇಲಿ ಮೂಲಕ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದ್ರ ನಡುವೆಯೇ ಮೇ 6ರಂದು ನಡೆದ ದುರ್ಘಟನೆಯ ಬಳಿಕ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಕ್ರಮ ಗಣಿಗಾರಿಕೆ ನಡೆದಿದೆ ಎಂಬ ರೀತಿಯಲ್ಲಿ ಸುಳ್ಳು ಹಾಗೂ ಸಾರ್ವಜನಿಕರನ್ನು ದಾರಿತಪ್ಪಿಸುವ ಮಾಹಿತಿ ಹರಡುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಇಂತಹ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಅನಗತ್ಯ ಗೊಂದಲ ಹಾಗೂ ಶಾಂತಿ ಭಂಗ ಉಂಟುಮಾಡುವ ಉದ್ದೇಶದಿಂದ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.






