ಕಲಬುರಗಿ | ಮಕ್ಕಳು ಪಾಲಕರ ಪ್ರೀತಿಯಿಂದ ವಂಚಿತರಾಗಬಾರದು: ನಲಿನ್ ಅತುಲ್

ಕಲಬುರಗಿ : ಸಮಾಜದಲ್ಲಿ ಮಕ್ಕಳು ಶಿಕ್ಷಣ ಹಾಗೂ ಪಾಲಕರ ಪ್ರೀತಿಯಿಂದ ವಂಚಿತರಾಗಬಾರದು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿಗಳಾದ ನಲಿನ್ ಅತುಲ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಮಕ್ಕಳ ಸಹಾಯವಾಣಿ-1098/112 ಮತ್ತು ಸರ್ಕಾರಿ ಹಾಗೂ ಸರ್ಕಾರೇತರ ಮಕ್ಕಳ ಪಾಲನಾ ಸಂಸ್ಥೆಗಳು ಇವರ ಸಹಯೋಗದಲ್ಲಿ ನಗರದ ಮಿನಿವಿಧಾನ ಸೌಧದಿಂದ ಜಗತ್ ವೃತ್ತದವರೆಗೆ ನಡೆದ ಜಾಗೃತಿ ಜಾಥಾಗೆ ಚಾಲನೆಯನ್ನು ನೀಡಿ ಮಾತನಾಡಿದರು.
ಇಂದಿನ ಸಮಾಜದಲ್ಲಿ ಕೆಲ ಪಾಲಕರು ಯಾವುದೋ ವೈಯಕ್ತಿಕ ಕಾರಣಗಳಿಂದ ತಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದಾರೆ. ಅಂತಹ ಮಕ್ಕಳನ್ನು ಕಾನೂನು ಪ್ರಕಾರ ದತ್ತು ನೀಡಲು ಸರ್ಕಾರದ ನಿರ್ದೇಶನದಂತೆ ಇಂತಹ ಘಟನೆಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ದತ್ತು ಮಾಸಾಚರಣೆ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
2025-26ನೇ ಸಾಲಿನಲ್ಲಿ ನವೆಂಬರ್ 2025ರ ಮಾಹೆಯಲ್ಲಿ ಅಂತರರಾಷ್ಟ್ರೀಯ ದತ್ತು ಮಾಸವನ್ನಾಗಿ ಆಚರಿಸಲು ಹಾಗೂ ಜಿಲ್ಲೆಯಾದ್ಯಂತ ಕಾನೂನು ಬದ್ಧ ದತ್ತು ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಾದ ಮಂಜುಳಾ ಪಾಟೀಲ್ ಅವರು 2025-26 ನೇ ಸಾಲಿನ ವಿಶೇಷ ಚೇತನ ಮಕ್ಕಳ ದತ್ತು ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಇದೇ ಸಂದರ್ಭದಲ್ಲಿ ಡಾನ್ ಬಾಸ್ಕೋ ಸಂಸ್ಥೆ ವತಿಯಿಂದ ಮಕ್ಕಳು ಕಾನೂನು ಬದ್ಧ ದತ್ತು ಕುರಿತು ಬೀದಿ ನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ರಾಯಪ್ಪ ಹುಣಸಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶರಣಬಸಪ್ಪ ಕ್ಯಾತನಾಳ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಬಸವರಾಜ, ಯೋಜನಾ ನಿರ್ದೇಶಕರಾದ ಸಂತೋಷ ಕುಲಕರ್ಣಿ, ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀಶೈಲ್, ಜಿಲ್ಲಾ ಆಯುಷ್ಯ ಅಧಿಕಾರಿ ಡಾ.ಕೆ.ಬಿ ಬಬಲಾದ್, ಮಾರ್ಗಧರ್ಶಿ ಸಂಸ್ಥೆಯ ನಿರ್ದೇಶಕರಾದ ಆನಂದರಾಜ, ಅನುಪಾಲನ ಗೃಹ ನಿರ್ದೇಶಕರಾದ ಅನಂತರಾಜ್, ಡಾನ್ ಬಾಸ್ಕೊ ಸಂಸ್ಥೆಯ ಸಹ ನಿರ್ದೇಶಕಿ ಗೀತಾ, ಸರ್ಕಾರಿ ಮತ್ತು ಅರೆಸರ್ಕಾರಿ ಬಾಲಕ ಮತ್ತು ಬಾಲಕಿಯರ ಮಂದಿರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







