ಕಲಬುರಗಿ | ಮೇ 9, 10ರಂದು ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರ ಸಮಾರೋಪ, ಚಿಣ್ಣರ ರಂಗೋತ್ಸವ : ಡಾ.ಸುಜಾತಾ ಜಂಗಮಶೆಟ್ಟಿ

ಕಲಬುರಗಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ರಂಗಾಯಣ ಕಲಬುರಗಿ ವತಿಯಿಂದ ಮಕ್ಕಳ ಹಬ್ಬ 2025ರ ಮಕ್ಕಳ ಬೇಸಿಗೆ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಚಿಣ್ಣರ ರಂಗೋತ್ಸವ ಕಾರ್ಯಕ್ರಮವನ್ನು ಮೇ 9 ಮತ್ತು 10 ರಂದು ಸಂಜೆ 5.30 ಗಂಟೆಗೆ ಬಯಲು ರಂಗಮಂದಿರ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ದಿನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ನಡೆಯಲಿದೆ ಎಂದ ಅವರು, ಅಂದು ಸಂಜೆ 5.30ಕ್ಕೆ ನಡೆಯುವ ಮಕ್ಕಳ ಹಬ್ಬ ಸಮಾರೋಪ, ರಂಗೋತ್ಸವ ಉದ್ಘಾಟನಾ ಸಮಾರಂಭವನ್ನು ಅಫಜಲಪುರ ಶಾಸಕರಾದ ಎಂ.ವೈ.ಪಾಟೀಲ್ ಉದ್ಘಾಟಿಸುವರು. ಶಾಸಕ ಅಲ್ಲಮ ಪ್ರಭು ಪಾಟೀಲ್ ಅಧ್ಯಕ್ಷತೆ ವಹಿಸುವರು. ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಸಮಾರೋಪ ನುಡಿಗಳನ್ನಾಡುವರು, ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ ಬಸವರಾಜ ದೇಶಮುಖ, ಬೆಂಗಳೂರು ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ವಲಯದ ಜಂಟಿ ನಿರ್ದೇಶಕ ಬಸವರಾಜ ಹೂಗಾರ, ಡಿ.ವೈ.ಎಸ್.ಪಿ,ಬಸವೇಶ್ವರ ಹೀರಾ, ಆರಕ್ಷಕ ನಿರೀಕ್ಷಕ ಸುಶೀಲಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಹೇಳಿದರು.
ಮೇ 9ರಂದು ಸಂಜೆ 6.30ಗಂಟೆಗೆ ಭೀಮಾ ನದಿ ಮತ್ತು ಕಾಗಿಣಾ ನದಿ ತಂಡದಿಂದ ಹಚ್ಚೇವು ಕನ್ನಡ ದೀಪ, ಭಾರತ ಭಾಗ್ಯ ವಿಧಾತ ನೃತ್ಯ, ರಾಜ ಮತ್ತು ವೃಕ್ಷ ದೇವತೆ ನಾಟಕ, ರಂಗಗೀತೆ, ಹೋರಾಟದ ಹಾಡು ಜರುಗಲಿವೆ. ಮೇ 10 ಸಂಜೆ 6.30ಕ್ಕೆ ಜಾನಪದ ಗೀತೆ, ಶ್ಮಶಾನ ಕುರುಕ್ಷೇತ್ರ, ಅಲ್ಲಾಹುದ್ದಿನ್ ಅದ್ಬುತ್ ದ್ವೀಪ ನಾಟಕ ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಕ್ಕಳ ಹಬ್ಬದ ಶಿಬಿರದ ನಿರ್ದೇಶಕ ರಾಜಕುಮಾರ ಎಸ್.ಕೆ ಇದ್ದರು.





