ಕಲಬುರಗಿ | ಚಿಂಚೋಳಿ ಶಾಸಕರೇ ಮೊದಲು ಕೆಡಿಪಿ ಸಭೆ ಮಾಡಿ : ಶರಣು ಪಾಟೀಲ ಮೋತಕಪಲ್ಲಿ

ಕಲಬುರಗಿ: ಚಿಂಚೋಳಿ ಮತಕ್ಷೇತ್ರದಲ್ಲಿ ಕೊನೆಯ ತ್ರೈಮಾಸಿಕ ಕೆಡಿಪಿ ಸಭೆ 2024ರ ಜುಲೈ 12 ರಂದು ಜರುಗಿದ್ದು, ಶಾಸಕ ಅವಿನಾಶ್ ಜಾಧವ್ ಅವರು ಕೂಡಲೇ ಅಭಿವೃದ್ಧಿ ಕುರಿತ ತ್ರೈಮಾಸಿಕ ಕೆಡಿಪಿ ಸಭೆ ಕರೆದು ನಂತರ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಮಾತನಾಡಿ ಎಂದು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ವಕ್ತಾರರಾದ ಶರಣು ಪಾಟೀಲ ಮೋತಕಪಳ್ಳಿ ಆಗ್ರಹಿಸಿದ್ದಾರೆ.
ಎರಡನೇ ಬಾರಿ ಚಿಂಚೋಳಿ ಶಾಸಕರಾಗಿ ಆಯ್ಕೆಯಾದ ಡಾ.ಅವಿನಾಶ ಜಾಧವ್ ಅವರು ತಮ್ಮ ಕ್ಷೇತ್ರದಲ್ಲಿ ತಾವು ಮಾಡಿದ ಸಾಧನೆ ಏನು ? ಚಿಂಚೋಳಿಗೆ ತಮ್ಮ ಕೊಡುಗೆ ಏನು ಎನ್ನುವುದು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸರಕಾರದಿಂದ ಅನುದಾನ ತರುವುದು ಇರಲಿ 2013ರ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರ ಕೊಟ್ಟ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳುವುದು ತಮ್ಮಿಂದ ಆಗಿಲ್ಲ ಎಂದು ಟೀಕಿಸಿದ್ದಾರೆ.
ಖರ್ಗೆ ಅವರು ಕೆಡಿಪಿ ಸಭೆ ಮಾಡಿಲ್ಲ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಸ್ತಾರೆ ಅಂತ ಹೇಳುವ ನೀವು ಬೆಂಗಳೂರಿನಲ್ಲಿ ಸಭೆ ಮಾಡುವುದು ಒಂದು ದೊಡ್ಡ ಅಪರಾಧ ಅನ್ನುವ ರೀತಿ ಹೇಳ್ತಿದ್ದೀರಿ, ಮೊದಲು ನೀವು ಎಷ್ಟು ದಿನ ಚಿಂಚೋಳಿಯಲ್ಲಿ ವಾಸ್ತವ್ಯ ಮಾಡಿದ್ದೀರಿ, ತಾವು ಚಿಂಚೋಳಿಯಲ್ಲಿ ಕೆಡಿಪಿ ಸಭೆ ನಡೆಸಿ 11 ತಿಂಗಳು ಆಯ್ತು, ಶಾಸಕರಾದ ಮೇಲೆ ಎಷ್ಟು ಕೆಡಿಪಿ ಸಭೆ ಮಾಡಿದ್ದೀರಿ ಅನ್ನುವ ವಿಚಾರ ಜನೆತೆಗೆ ತಿಳಿಸಬೇಕೆಂದು ಒತ್ತಾಯಿಸಿದ್ದಾರೆ.
ಯಾರನ್ನೋ ಖುಷಿ ಪಡಿಸಲು ಶಾಸಕರು ಬಲಿಪಶು ಆಗಿ ಈ ರೀತಿ ಹೇಳಿಕೆ ಕೊಡುವುದು ಸರಿಯಲ್ಲ. ಸ್ವಂತ ಕ್ಷೇತ್ರದ ಅಭಿವೃದ್ಧಿಯ ಚಿಂತನೆ ಇರುವ ಯಾವ ಶಾಸಕರು ತಮ್ಮದೇ ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಹೀಗೆ ನಿರಾಧಾರ ಅಸಂಬದ್ಧ ಹೇಳಿಕೆ ಕೊಡಲ್ಲ. ಸಚಿವ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಮೊದಲ ಜನ ಸ್ಪಂದನ ಕಾರ್ಯಕ್ರಮ ನಡೆಸಿದ್ದು, ಚಿಂಚೋಳಿಯಲ್ಲಿ. ಅವರು ಚಿಂಚೋಳಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ, ಚಿಂಚೋಳಿ ಶಾಸಕರು ರಾಜಕೀಯ ಬಿಟ್ಟು ಅಭಿವೃದ್ಧಿ ಕಡೆ ಗಮನ ಕೊಡುವುದು ಸೂಕ್ತ ಎಂದು ಹೇಳಿದ್ದಾರೆ.







