ಕಲಬುರಗಿ | ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಸಿಐಟಿಯು ಪ್ರತಿಭಟನೆ

ಕಲಬುರಗಿ: ರಾಜ್ಯದಲ್ಲಿ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು, ವಿ.ಬಿ. ರಾಮಜಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು, ಕೆಪಿಆರ್‌ಎಸ್ ಹಾಗೂ ಎಐಎಡಬ್ಲ್ಯುಯು ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಕಲಬುರಗಿಯಲ್ಲಿ ಪ್ರತಿಭಟನೆ ಹಾಗೂ ಜೈಲ್ ಭರೋ ಚಳವಳಿ ನಡೆಯಿತು.
ಕ್ವಿಟ್ ಇಂಡಿಯಾ ಚಳವಳಿಯ ಸ್ಫೂರ್ತಿಯೊಂದಿಗೆ ದೇಶಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ನಡೆದ ಹೋರಾಟದಲ್ಲಿ ಕಾರ್ಮಿಕರು, ರೈತರು ಹಾಗೂ ಕೃಷಿ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಪ್ರತಿಭಟನಾಕಾರರು ಮಾತನಾಡಿ, ರಾಜ್ಯ ಸರ್ಕಾರವು ಕಳೆದ ಮೇ 22ರಂದು ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಹೊರಡಿಸಿರುವುದು ದಶಕಗಳ ಕಾರ್ಮಿಕ ಹೋರಾಟದ ಫಲವಾಗಿದೆ. ಆದರೆ ಸುಮಾರು ಒಂಬತ್ತು ವರ್ಷಗಳ ಬಳಿಕ ಶೇ.60ರಷ್ಟು ವೇತನ ಹೆಚ್ಚಳ ಮಾಡಲಾಗಿದ್ದರೂ, ಕಳೆದ ಒಂದು ದಶಕದ ಬೆಲೆ ಏರಿಕೆಗೆ ಹೋಲಿಸಿದರೆ ಈ ಹೆಚ್ಚಳ ಸಮರ್ಪಕವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ನೌಕರರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಕಾಯಕ ಮಿತ್ರೆಯರು ಸೇರಿದಂತೆ ಹಲವು ವಿಭಾಗಗಳಲ್ಲಿ ದಶಕಗಳಿಂದ ದುಡಿಯುತ್ತಿರುವ ಮಹಿಳಾ ಕಾರ್ಮಿಕರನ್ನು ಕನಿಷ್ಠ ವೇತನದ ವ್ಯಾಪ್ತಿಗೆ ತರಲಾಗಿಲ್ಲ. ಈ ಎಲ್ಲ ಕಾರ್ಮಿಕರಿಗೂ ಕನಿಷ್ಠ ವೇತನದ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ವೇತನ ಹೆಚ್ಚಳವನ್ನು 2022ರಿಂದಲೇ ಅನ್ವಯಿಸುವ ಬದಲು 2026ರ ಮೇ 22ರಿಂದ ಜಾರಿಗೆ ತಂದಿರುವುದರಿಂದ ರಾಜ್ಯದ ಸುಮಾರು 1.77 ಕೋಟಿ ಕಾರ್ಮಿಕರು ನಾಲ್ಕು ವರ್ಷಗಳ ವೇತನ ಹೆಚ್ಚಳದಿಂದ ವಂಚಿತರಾಗಿದ್ದಾರೆ. ಆದ್ದರಿಂದ ಕನಿಷ್ಠ ವೇತನದ ಅಧಿಸೂಚನೆಯನ್ನು ಹಿಂದಿನ ದಿನಾಂಕದಿಂದಲೇ ಅನ್ವಯಿಸಿ, ಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕನಿಷ್ಠ ವೇತನ ಹೆಚ್ಚಳದಿಂದ ಕೈಗಾರಿಕೆಗಳು ರಾಜ್ಯದಿಂದ ಹೊರಹೋಗಲಿವೆ ಎಂಬ ವಾದ ಸರಿಯಲ್ಲ. ಕನಿಷ್ಠ ವೇತನ ಉತ್ತಮವಾಗಿರುವ ಕಾರಣವೇ ಬೇರೆ ರಾಜ್ಯಗಳ ಕಾರ್ಮಿಕರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಕಾರ್ಮಿಕರಿಗೆ ನ್ಯಾಯಯುತ ವೇತನ ನೀಡುವುದರಿಂದ ರಾಜ್ಯದ ಆರ್ಥಿಕತೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.
ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಗ್ರಾಮೀಣ ಕಾರ್ಮಿಕರ ಬದುಕಿನ ಮೇಲೆ ಪರಿಣಾಮ ಬೀರುವ ವಿ.ಬಿ. ರಾಮಜಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ವಿದ್ಯುತ್ ಖಾಸಗೀಕರಣಕ್ಕೆ ಸಂಬಂಧಿಸಿದ ಮಸೂದೆ ಹಾಗೂ ಸ್ಮಾರ್ಟ್ ಮೀಟರ್ ನೀತಿಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿಗೊಳಿಸಬೇಕು. ರೈತರಿಗೆ ಸಮರ್ಪಕ ಬೆಳೆ ವಿಮೆ ಒದಗಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಕಾರ್ಪೊರೇಟ್ ಸಾಲ ಮನ್ನಾ ನೀತಿಯನ್ನು ಪ್ರಶ್ನಿಸಿದರು.
2020ರಲ್ಲಿ ದೆಹಲಿ ಗಡಿಯಲ್ಲಿ ಆರಂಭಗೊಂಡ ರೈತರ ಹೋರಾಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಬದಲಾಗಿ ರೈತರು ಮತ್ತು ಕಾರ್ಮಿಕರಿಗೆ ತೊಂದರೆ ಉಂಟುಮಾಡುವ ಹಲವು ನೀತಿಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕಾರ್ಮಿಕರು, ರೈತರು ಹಾಗೂ ಕೃಷಿ ಕೂಲಿಕಾರರ ಸಮಸ್ಯೆಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೂಡಲೇ ಪರಿಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷ ಎಂ.ಬಿ. ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ಭೀಮಶೆಟ್ಟಿ ಯಂಪಳ್ಳಿ, ಮೇಘರಾಜ ಕಟಾರೆ, ಶಾಂತಾ ಘಂಟಿ, ಲವಿತ್ರ ವಸ್ತ್ರದ್, ಪ್ರಕಾಶ್ ಬನ್ನಿಗಿಡ, ಕಲ್ಯಾಣಿ ಸಿಂಗೆ, ಮಹಾದೇವ ಸಿಂಗೆ, ಅಶೋಕ ಬೊಮ್ಮನಳ್ಳಿ, ಖಜಾಸಾಬ್ ನದಾಫ್, ಕಾಶೀನಾಥ್ ಬಂಡಿ, ಶ್ಯಾಮಣ್ಣ ರೆಡ್ಡಿ, ದಿಲೀಪ್ ನಾಗೂರೆ, ನಾಗಯ್ಯ ಸ್ವಾಮಿ, ಸುಜಾತಾ ಕಡೆಹಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.






