Kalaburagi | ಕ್ಲೇಮ್ ನಿರಾಕರಣೆ: ವಿಮಾ ಕಂಪೆನಿಗೆ 2.39 ಲಕ್ಷ ರೂ. ಪಾವತಿಸಲು ಆದೇಶ
ದೂರುದಾರರಿಗೆ ಡಿಡಿ ಹಸ್ತಾಂತರಿಸಿದ ನ್ಯಾಯವಾದಿ ವೈಜನಾಥ್

ಕಲಬುರಗಿ : ಪ್ರಕರಣವೊಂದಕ್ಕೆ ಸಂಬಂಧಿಸಿ ಕ್ಯಾಶ್‌ಲೆಸ್ ಚಿಕಿತ್ಸೆಗೆ ಅನುಮತಿ ನೀಡಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಕ್ಲೇಮ್ ನಿರಾಕರಿಸಿರುವುದು ಸರಿಯಲ್ಲ ಎಂದು ಕಲಬುರಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ.
ಶಾಲಿ ನಜಿರ್ ಹಾಗೂ ಅವರ ಪುತ್ರ ಶಾಲಿ ಖಾದರ್ ಭಾಷಾ ಸಲ್ಲಿಸಿದ್ದ ಗ್ರಾಹಕರ ಪ್ರಕರಣ ಸಂಖ್ಯೆ 279/2025ರ ದೂರನ್ನು ಭಾಗಶಃ ಪುರಸ್ಕರಿಸಿರುವ ಆಯೋಗ, ನಿವಾ ಭೂಪಾ ಹೆಲ್ತ್ ಇನ್ಶೂರೆನ್ಸ್ ಕಂಪೆನಿಗೆ ಒಟ್ಟು 2,39,574 ಪಾವತಿಸುವಂತೆ ಆಯೋಗದ ಅಧ್ಯಕ್ಷೆ (ಪ್ರಭಾರಿ) ಮಾಲತಿ ಗುರಣ್ಣ ಹಾಗೂ ಸದಸ್ಯ ಎಂ. ಲೋಕೇಶ್ ಅವರು 2026ರ ಜು. 28ರಂದು ಈ ಆದೇಶ ನೀಡಿದ್ದಾರೆ.
ದೂರುದಾರರು ವಾರ್ಷಿಕ 37,460 ಪ್ರೀಮಿಯಂ ಪಾವತಿಸಿ 10 ಲಕ್ಷ ವಿಮಾ ಮೊತ್ತದ ಕುಟುಂಬ ಆರೋಗ್ಯ ವಿಮಾ ಪಾಲಿಸಿ ಪಡೆದಿದ್ದರು. ಪಾಲಿಸಿ ಅವಧಿಯಲ್ಲಿ ಪುತ್ರನ ಬಲ ಮೊಣಕಾಲಿನ ಸಮಸ್ಯೆಗೆ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ವಿಮಾ ಕಂಪೆನಿಯಿಂದ ಕ್ಯಾಶ್‌ಲೆಸ್ ಚಿಕಿತ್ಸೆಗೆ ಆರಂಭದಲ್ಲಿ ಅನುಮತಿ ಪಡೆಯಲಾಗಿತ್ತು.
ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಂದರ್ಭದಲ್ಲಿ ಸಂಬಂಧಿತ ಕಾಯಿಲೆಗೆ 24 ತಿಂಗಳ ವೇಟಿಂಗ್ ಪೀರಿಯಡ್ ಪೂರ್ಣಗೊಂಡಿಲ್ಲ ಎಂಬ ಕಾರಣ ನೀಡಿ ಕಂಪೆನಿ ಕ್ಯಾಶ್‌ಲೆಸ್ ಅನುಮತಿಯನ್ನು ಹಿಂಪಡೆದು ಕ್ಲೇಮ್ ನಿರಾಕರಿಸಿತ್ತು. ಇದರಿಂದ ದೂರುದಾರರು ಚಿಕಿತ್ಸಾ ವೆಚ್ಚವಾಗಿ 2,24,574 ಮೊತ್ತವನ್ನು ಸ್ವಂತವಾಗಿ ಪಾವತಿಸಿದ್ದರು. ವಿಮಾ ಕಂಪೆನಿಯ ಕ್ರಮವನ್ನು ಪ್ರಶ್ನಿಸಿ ನ್ಯಾಯವಾದಿ ವೈಜನಾಥ ಎಸ್. ಝಳಕಿ ಅವರ ಮೂಲಕ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಚಿಕಿತ್ಸೆಗೆ ಮುನ್ನ ಕ್ಯಾಶ್‌ಲೆಸ್ ಅನುಮತಿ ನೀಡಿ ನಂತರ ಅದನ್ನು ಹಿಂಪಡೆದು ಕ್ಲೇಮ್ ನಿರಾಕರಿಸಿರುವ ವಿಮಾ ಕಂಪನಿಯ ಕ್ರಮವನ್ನು ಒಪ್ಪಲಿಲ್ಲ. ಈ ಕ್ರಮದಿಂದ ಗ್ರಾಹಕರಿಗೆ ಸೇವಾ ನ್ಯೂನತೆ ಉಂಟಾಗಿದೆ ಎಂದು ಆಯೋಗ ತೀರ್ಮಾನಿಸಿತು. ಹೀಗಾಗಿ ಚಿಕಿತ್ಸಾ ವೆಚ್ಚದ 2,24,574, ಮಾನಸಿಕ ಹಿಂಸೆ ಹಾಗೂ ಸೇವಾ ನ್ಯೂನತೆಗೆ 10,000 ಪರಿಹಾರ ಮತ್ತು ವ್ಯಾಜ್ಯ ವೆಚ್ಚವಾಗಿ 5,000 ಸೇರಿದಂತೆ ಒಟ್ಟು 2,39,574 ಪಾವತಿಸುವಂತೆ ವಿಮಾ ಕಂಪೆನಿಗೆ ಆದೇಶಿಸಿ, ಆದೇಶದ 45 ದಿನಗಳೊಳಗೆ ಮೊತ್ತ ಪಾವತಿಸದಿದ್ದಲ್ಲಿ, 2026ರ ಜುಲೈ 28ರಿಂದ ಶೇ.6ರ ಬಡ್ಡಿಯೊಂದಿಗೆ ಮೊತ್ತ ಪಾವತಿಸಬೇಕೆಂದು ಆಯೋಗ ಸೂಚಿಸಿತ್ತು.
ಮನೆ ಬಾಗಿಲಿಗೆ ಪರಿಹಾರ :
ಈ ಪ್ರಕರಣದಲ್ಲಿ ಉಚಿತ ಕಾನೂನು ಸೇವೆ ಸಲ್ಲಿಸಿದ್ದ ನ್ಯಾಯವಾದಿ ವೈಜನಾಥ ಎಸ್. ಝಳಕಿ ಅವರು ವಿಮಾ ಕಂಪೆನಿಯಿಂದ ಪಡೆದ 2,39,574 ಮೊತ್ತದ ಡಿಡಿಯನ್ನು ದೂರುದಾರರ ಮನೆಗೆ ತೆರಳಿ ಹಸ್ತಾಂತರಿಸಿದರು.
ಗ್ರಾಹಕರ ಹಕ್ಕುಗಳ ಅರಿವು ಅಗತ್ಯ : ಗ್ರಾಹಕರಿಗೆ ತಮ್ಮ ಹಕ್ಕುಗಳ ಬಗ್ಗೆ ಸಮರ್ಪಕ ಅರಿವು ಇಲ್ಲದ ಕಾರಣ ಕಂಪೆನಿಗಳಿಂದ ದೊರೆಯಬೇಕಾದ ಸೌಲಭ್ಯಗಳು, ಸೇವೆಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಗ್ರಾಹಕರ ಹಕ್ಕುಗಳನ್ನು ರಕ್ಷಿಸಿ, ಅನ್ಯಾಯಕ್ಕೊಳಗಾದವರಿಗೆ ಸೂಕ್ತ ಪರಿಹಾರ ಒದಗಿಸುವುದು ಗ್ರಾಹಕರ ಆಯೋಗದ ಪ್ರಮುಖ ಉದ್ದೇಶವಾಗಿದೆ. ವಂಚಿತ ಗ್ರಾಹಕರಿಗೆ ಈ ತೀರ್ಪು ಆಶಾ ಭಾವನೆ ಮೂಡಿಸಿದೆ. -ವೈಜನಾಥ್ ಎಸ್. ಝಳಕಿ, ನ್ಯಾಯವಾದಿ, ಗ್ರಾಹಕರ ಹಕ್ಕುಗಳ ಹೋರಾಟಗಾರರು ಕಲಬುರಗಿ






