ಕಲಬುರಗಿ | 'ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ'ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಕಲಬುರಗಿ : ನಗರದ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ 'ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ'ವನ್ನು ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಕಲಬುರಗಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ರಾಜ್ಯಸಭಾ ಸದಸ್ಯ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಘನ ಉಪಸ್ಥಿತಿ ವಹಿಸಿದರು. ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಿಎಂ ಅವರಿಗೆ ಸಾಥ್ ನೀಡಿದರು.
ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ನಿಯಮಿತದ ಅಧ್ಯಕ್ಷೆ ಹಾಗೂ ಉತ್ತರ ಮತಕ್ಷೇತ್ರದ ಶಾಸಕಿ ಕನೀಝ್ ಫಾತೀಮಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಮಾತನಾಡಿದ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, 27 ಸಾವಿರ ಉದ್ಯೋಗಾಂಕ್ಷಿಗಳು ಪಾಲ್ಗೊಂಡಿದ್ದಾರೆ. ಬೆಂಗಳೂರಿನಂಥ 45 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಅದರ ಮೇರೆಗೆ ಎಲ್ಲಾ ವಿಭಾಗದಲ್ಲೂ ಮೇಳ ಆಯೋಜಿಸುತ್ತಿದ್ದೇವೆ. ಗ್ಯಾರಂಟಿ ಘೋಷಿಸಿದಲ್ಲದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಯುವ ನಿಧಿ ಫಲಾನುಭವಿಗಳನ್ನೂ ಉದ್ಯೋಗಕ್ಕೆ ಅವಕಾಶ ನೀಡುತ್ತಿದ್ದೇವೆ, ಹಂತ ಹಂತವಾಗಿ ವರ್ಷದಲ್ಲಿ ಹೆಚ್‌ಕೆಸಿಸಿಐ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ರಾಜ್ಯದ ಯುವಕರ ಭವಿಷ್ಯವನ್ನು ನಿರ್ಮಾಣ ಮಾಡಲು ಈ ಉದ್ಯೋಗ ಮೇಳ ಮಾಡುತ್ತಿದ್ದೇವೆ. ಮೈಸೂರು, ಹುಬ್ಬಳ್ಳಿ ಧಾರವಾಡ ದಲ್ಲಿಯೂ ಉದ್ಯೋಗ ಮೇಳ ಹಮ್ಮಿಕೊಳ್ಳಲಿದ್ದೇವೆ. ಯುವಕರಿಗೆ ಕೌಶಲ್ಯ ನೀಡಿ, ಉದ್ಯೋಗ ಕೊಡಲು ಸರಕಾರ ಯೋಜಿಸುತ್ತಿದೆ ಎಂದರು.
ದೇಶದಲ್ಲಿ ಅತಿದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ, ಈ ನಿರುದ್ಯೋಗ ಹೋಗಲಾಡಿಸಲು ಕೇಂದ್ರ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಆದರೆ ನಮ್ಮ ರಾಜ್ಯದ ಭವಿಷ್ಯದ ಯುವಕರಿಗೆ ಉದ್ಯೋಗ ನೀಡಲು ನಾವು ಬದ್ಧರಾಗಿದ್ದೇವೆ ಎಂದರು.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾಪೂರ, ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಅಫಜಲಪುರ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ.ವೈ.ಪಾಟೀಲ್, ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ್, ಜೇವರ್ಗಿ ಶಾಸಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯಸಿಂಗ್, ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರು ಗೌರವ ಉಪಸ್ಥಿತಿ ವಹಿಸುವರು.
ಕಾರ್ಯಕ್ರಮದಲ್ಲಿ ಕಲಬುರಗಿ ಲೋಕಸಭಾ ಸಂಸದ ರಾಧಾಕೃಷ್ಣ ಆರ್.ದೊಡ್ಡಮನಿ, ಶಾಸಕ ಅಲ್ಲಮಪ್ರಭು ಪಾಟೀಲ್, ರಾಜಾ ವೇಣುಗೋಪಾಲ್ ನಾಯಕ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸೈಯದ್ ಮಹಮ್ಮದ್ ಅಲಿ ಅಲ್ ಹುಸೇನಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜ್ಜಾಹರ್ ಖಾನ್ ಆಲಂ, ಎಂಎಲ್ಸಿ ತಿಮ್ಮಣ್ಣಪ್ಪ ಕಮಕನೂರ, ಡಾ. ಚಂದ್ರಶೇಖರ ಬಿ. ಪಾಟೀಲ್, ಜಗದೇವ ಗುತ್ತೇದಾರ್, ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಉದ್ಯೋಗ ಮೇಳಕ್ಕೆ ಹರಿದು ಬಂದ ಜನಸಾಗರ :
ಇಲ್ಲಿನ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉದ್ಯೋಗ ಮೇಳದಲ್ಲಿ ಸಾವಿರಾರು ಯುವಕ - ಯುವತಿಯರು ಜನಸಾಗರದಂತೆ ಹರಿದುಬoದಿರುವುದು ಕಂಡು ಬಂತು. 27 ಸಾವಿರಕ್ಕೂ ಹೆಚ್ಚಿನ ಉದ್ಯೋಗಾಂಕಾಕ್ಷಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬುಧವಾರ ಬೆಳಗ್ಗೆಯಿಂದಲೇ ಸಂದರ್ಶನವನ್ನು ಎದುರಿಸುತ್ತಿದ್ದಾರೆ.