ಕಲಬುರಗಿ | ಬೆಳೆಹಾನಿ-ಸಮೀಕ್ಷೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಕಲಬುರಗಿ: ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿರುವ ಬೆಳೆ ನಷ್ಟ ಸೇರಿದಂತೆ ಇತರೆ ಹಾನಿಗಳ ಅಂದಾಜನ್ನು ಸಮೀಕ್ಷೆ ಮಾಡಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಕಲಬುರಗಿ ಜಿಲ್ಲೆಗೆ ಸಂಬಂಧಿಸಿದಂತೆ 2025 ರ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿ ಹಾಗೂ ತೆಗೆದುಕೊಂಡ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಬೆಂಗಳೂರಿನ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿಯವರೊಂದಿಗೆ ಸಭೆಯಲ್ಲಿ ಉಪಸ್ಥಿತರಿದ್ದ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟವನ್ನು ಸಮೀಕ್ಷೆ ಮಾಡಲು ತಕ್ಷಣದ ಕ್ರಮ ಕೈಗೊಳ್ಳುವಂತೆ ಕಲಬುರಗಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಂದುವರೆದು ಮಾತನಾಡಿದ ಸಚಿವರು, ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ ಪ್ರಾಥಮಿಕ ಜಂಟಿ ಸಮೀಕ್ಷೆ ಕಾರ್ಯ ಕೈಗೊಂಡಿದ್ದು, 2025ರ ಜನವರಿ ಯಿಂದ ಆಗಸ್ಟ್ ವರೆಗೆ 698.4 ಮೀ.ಮಿ. ಮಳೆ ಆಗಿದ್ದು, ಇದು ವಾಡಿಕೆಗಿಂತ ಶೇ.49ರಷ್ಟು ಹೆಚ್ಚುವರಿ ಮಳೆ ಸುರಿದಿರುವುದು ವರದಿಯಾಗಿದೆ ಎಂದು ಸಭೆಯ ಗಮನಕ್ಕೆ ಮಾಹಿತಿ ನೀಡಿದರು.
ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಶೇ.69ರಷ್ಟು ಹೆಚ್ಚಿನ ಮಳೆಯಾಗಿದ್ದು, ಇದರಿಂದ ಜಿಲ್ಲೆಯಾದ್ಯಂತ 1,05,967 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆನಷ್ಟವುಂಟಾಗಿರುವ ಬಗ್ಗೆ ಪ್ರಾಥಮಿಕ ವರದಿ ತಿಳಿಸಿವೆ. ಪೂರ್ವ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಒಳ್ಳೆಯ ಮಳೆ ಆಗಿರುವ ಕಾರಣ ಹೆಸರು ಹಾಗೂ ಉದ್ದು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಆಗಸ್ಟ್ ಮಾಹೆಯಲ್ಲಿ ಹೆಚ್ಚುವರಿ ಮಳೆಯಿಂದಾಗಿ ಕಟಾವಿನ ಸಂದರ್ಭದಲ್ಲಿ ಈ ಬೆಳೆಗಳಿಗೆ ಹಾನಿಯಾದ ಬಗ್ಗೆ ವರದಿಗಳು ಬರುತ್ತಿವೆ. ಬೆಳೆನಷ್ಟದ ನಿಖರ ಮಾಹಿತಿ ಜಿಲ್ಲಾಧಿಕಾರಿಗಳ ವರದಿಯ ನಂತರವಷ್ಟೇ ತಿಳಿಯುತ್ತದೆ ಎಂದು ಹೇಳಿದರು.
ನಂತರ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಆಗಿರುವ ಬೆಳೆ ಹಾನಿ ಸಮೀಕ್ಷೆಯನ್ನು ಪೂರ್ಣಗೊಳಿಸಿ, ಅಂತಿಮ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ನಾಲ್ವರು ರೈತರು ಹಾಗೂ ಮನೆ ಬಿದ್ದು ಇಬ್ಬರು ಮೃತರಾಗಿದ್ದಾರೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 696 ಮನೆಗಳು ಕುಸಿದಿದ್ದು, 103 ಜಾನುವಾರುಗಳು ಮೃತಪಟ್ಟಿರುತ್ತವೆ ಎಂದು ಮಾಹಿತಿ ನೀಡಿದರು. ಪ್ರಾಣಹಾನಿ ಹಾಗೂ ಮಳೆಯಿಂದಾಗಿ ಸಂಭವಿಸಿದ ಜಾನುವಾರು ಹಾನಿ, ಮನೆ ಹಾನಿಗೆ ಸಂಬಂಧಿಸಿದಂತೆ ಈಗಾಗಲೆ ಜಿಲ್ಲಾ ಆಡಳಿತದ ವತಿಯಿಂದ 18 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ ಎಂದರು.
ಈ ಕುರಿತಂತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಜಿಲ್ಲಾಧಿಕಾರಿಗಳಿಂದ ವರದಿ ಬಂದ ನಂತರ ಅಗತ್ಯ ಕ್ರಮವಹಿಸಲಾಗುವುದು ಮತ್ತು ಬೆಳೆನಷ್ಟವನ್ನು ಶೀಘ್ರದಲ್ಲಿ ರೈತರಿಗೆ ವಿತರಿಸಲಾಗುವುದು ಎಂದು ತಿಳಿಸಿದರು.
ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಸೇಡಂ ಸಹಾಯಕ ಆಯುಕ್ತರಾದ ಪ್ರಭುರಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







