ಕಲಬುರಗಿ | ಆಯೋಗದ ಆದೇಶ ಉಲ್ಲಂಘನೆ: ಮೂರು ಪ್ರಕರಣಗಳಲ್ಲಿ 65 ಸಾವಿರ ರೂ. ದಂಡ: ಬಿ.ವೆಂಕಟ ಸಿಂಗ್

ಕಲಬುರಗಿ : ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ ಅದನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸಿದ್ದ ಮೂರು ಪ್ರಕರಣಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಒಟ್ಟು 65,000 ರೂ. ದಂಡ ವಿಧಿಸಲಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟ್ ಸಿಂಗ್ ತಿಳಿಸಿದ್ದಾರೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 15ನೇ ಹಣಕಾಸು ಆಯೋಗದ ಅನುದಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿ ಗುರುಮೂರ್ತಿ 2022ರ ನ.11 ರಂದು ಹಾಗೂ ಜಲಾಲ್ 2023ರ ಅ.25 ರಂದು ಸಲ್ಲಿಸಿದ್ದ ಅರ್ಜಿಗಳಿಗೆ ಸಾರ್ವಜನಿಕ ಮಾಹಿತಿ ಅಧಿಕಾರಿ ಸ್ಪಂದಿಸಿರಲಿಲ್ಲ. ಆಯೋಗದ ನಿರ್ದೇಶನದ ಹೊರತಾಗಿಯೂ ಮಾಹಿತಿ ನೀಡದ ಹಿನ್ನೆಲೆಯಲ್ಲಿ, ಪಿಡಿಒ ನಾಗಭೂಷಣ ಅವರಿಗೆ ಎರಡು ಪ್ರಕರಣಗಳಲ್ಲಿ ತಲಾ 25,000 ರೂ. ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಅದೇ ರೀತಿ, ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಅಡಕಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರವಿ ಮದನಕರ್ ಅವರು 15ನೇ ಹಣಕಾಸು ಆಯೋಗದ ಅನುದಾನ ಕುರಿತು ಮಾಹಿತಿ ಕೋರಿ 2023ರ ಆ.7 ರಂದು ಅರ್ಜಿ ಸಲ್ಲಿಸಿದ್ದರು. ಆಯೋಗವು 2025ರ ಆ.15ರಂದು ಎಚ್ಚರಿಕೆಯ ಆದೇಶ ನೀಡಿದ್ದರೂ ಮಾಹಿತಿ ನೀಡದೇ, ಜ.23ರ ವಿಚಾರಣೆಗೆ ಗೈರಾಗಿದ್ದ ಪಿಡಿಒ ಭಗವಂತರಾಯ ಅವರಿಗೆ 15,000 ರೂ. ದಂಡ ವಿಧಿಸಲಾಗಿದೆ ಎಂದು ವೆಂಕಟ್ ಸಿಂಗ್ ವಿವರಿಸಿದರು.
ಮಾಹಿತಿ ಹಕ್ಕು ಕಾಯ್ದೆ–2005ರಲ್ಲಿ ಜಾರಿಗೆ ಬಂದಿದ್ದರೂ, ಅನೇಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಕಾಯ್ದೆಯ ಬಗ್ಗೆ ಸಮರ್ಪಕ ಅರಿವು ಇಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಬೀದರ್ ಮತ್ತು ಬಳ್ಳಾರಿಯಲ್ಲಿ ಕಾರ್ಯಗಾರಗಳು ನಡೆಸಲಾಗಿದ್ದು, ಫೆ.21ರಂದು ಕೊಪ್ಪಳದಲ್ಲಿ ಕಾರ್ಯಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದುವರೆಗೆ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕಾಗಿತ್ತು. ಆದರೆ ಫೆ.1ರಿಂದ ಸೆಕ್ಷನ್ 19(3)ರಡಿ ಮೇಲ್ಮನವಿಗಳನ್ನು ನೇರವಾಗಿ ಕಲಬುರಗಿ ಪೀಠದಲ್ಲೇ ಸ್ವೀಕರಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಮೂರು ತಿಂಗಳಲ್ಲಿ 400 ಪ್ರಕರಣ ವಿಲೇವಾರಿ :
ತಾವು 2025ರ ಅ.21ರಂದು ಕಲಬುರಗಿ ಪೀಠದ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ 992 ಪ್ರಕರಣಗಳ ವಿಚಾರಣೆ ನಡೆಸಿ 400 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಇದರಲ್ಲಿ 2010–2022ರ ನಡುವೆ ಬಾಕಿ ಇದ್ದ 357 ಪ್ರಕರಣಗಳಲ್ಲಿ 282 ವಿಲೇವಾರಿ ಮಾಡಿರುವುದು ವಿಶೇಷ. ಬಾಕಿ ಇರುವ 882 ಪ್ರಕರಣಗಳನ್ನು ಮಾರ್ಚ್ ಅಂತ್ಯದೊಳಗೆ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ ಎಂದರು. ಸದ್ಯ ಕಲಬುರಗಿ ಪೀಠದಲ್ಲಿ ಒಟ್ಟು 6,691 ಪ್ರಕರಣಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು.
ದಂಡ ವಸೂಲಿ ಕ್ರಮ :
ಆಯೋಗವು ದಂಡ ವಿಧಿಸುವುದಷ್ಟೇ ಅಲ್ಲದೆ, ದಂಡ ವಸೂಲಿಗೂ ಮುಂದಾಗಿದೆ. ಈವರೆಗೆ ಕೊಪ್ಪಳದ ಮಾಜಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಪ್ರಸ್ತುತ ಬಾಗಲಕೋಟೆ ಡಿಎಚ್‌ಒ ಡಾ. ರಾಜಕುಮಾರ ಯರಗಲ್ ಅವರಿಂದ 10,000 ರೂ., ಮತ್ತು ರಾಯಚೂರು ಜಿಲ್ಲೆಯ ಯರಮರಸ್ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಅವರಿಂದ 15,000 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ವೆಂಕಟ್ ಸಿಂಗ್ ತಿಳಿಸಿದರು.







