Kalaburagi | ಹಿಟ್ ಆ್ಯಂಡ್ ರನ್ ಅಪಘಾತ ಪ್ರಕರಣಗಳಲ್ಲಿ 26 ಸಂತ್ರಸ್ತರಿಗೆ ಪರಿಹಾರ ಮಂಜೂರು : ಡಿಸಿ ಫೌಝಿಯಾ ತರನ್ನುಮ್

ಕಲಬುರಗಿ: ಹಿಟ್ ಆ್ಯಂಡ್ ರನ್ ಅಪಘಾತದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 26 ಸಂತ್ರಸ್ತರಿಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಅವರ ಅಧ್ಯಕ್ಷತೆಯಲ್ಲಿ ಪರಿಹಾರದ ಅನುಮೋದನೆ ನೀಡಲಾಯಿತು.
ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಂಡಿಸಲಾದ 27 ಪ್ರಕರಣಗಳಲ್ಲಿ 26 ಪ್ರಕರಣಗಳನ್ನು ಜಿಲ್ಲಾಧಿಕಾರಿಗಳು, ಜನರಲ್ ಇನ್ಸೂರೆನ್ಸ್ ಕೌನ್ಸಿಲ್ ಕಮಿಷನರ್ ಹಾಗೂ ಕಲಬುರಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಸಹಮತಿಯೊಂದಿಗೆ ಪರಿಹಾರ ಧನ ಮಂಜೂರಾತಿ ಮಾಡಲು ಅನುಮೋದಿಸಲಾಯಿತು.
ಹಿಟ್ ಆಂಡ್ ರನ್ ಅಪಘಾತ ಪ್ರಕರಣಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಪೋಲಿಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ಢಿಕ್ಕಿ ಮಾಡಿದ ವಾಹನವು ಪತ್ತೆಯಾಗದೆ ಇದ್ದಲ್ಲಿ ಅಂತಹ ಪ್ರಕರಣಗಳಿಗೆ ಸಂಬಂಧಪಟ್ಟ ಸಹಾಯಕ ಆಯುಕ್ತರು Claim Enquiry Officer ಆಗಿದ್ದು, ಅವುಗಳನ್ನು ವಿಚಾರಣೆ ಮಾಡಿ ಸದರಿ Hit and Run ಅಪಘಾತದ ಸಭೆಯ ಅಧ್ಯಕ್ಷರಾದ ಮಾನ್ಯ ಜಿಲ್ಲಾಧಿಕಾರಿಗಳು Settlement Commissioner ಆಗಿದ್ದು, General Insurance Council ಗೆ ಪರಿಹಾರ ಧನ ನೀಡಲು ಅನುಮೋದನೆ ನೀಡುತ್ತಾರೆ.
General Insurance Council ಕಂಪನಿಯವರ ಇತ್ತೀಚಿನ ಭಾರತದ ಹೆದ್ದಾರಿ ಮತ್ತು ಸಾರಿಗೆ ಮಂತ್ರಾಲಯ ಆದೇಶದಂತೆ ಮೃತಪಟ್ಟವರಿಗೆ 2,00,000 ರೂ. (ಎರಡು ಲಕ್ಷ) ಮತ್ತು ಗಾಯಗೊಂಡವರಿಗೆ 50,000 ರೂ. (ರೂಪಾಯಿ ಐವತ್ತು ಸಾವಿರ) ಪರಿಹಾರ ಧನವನ್ನು ನೇರವಾಗಿ ಮೃತ ವಾರಸುದಾರರು ಮತ್ತು ಗಾಯಗೊಂಡವರ ಖಾತೆಗೆ ಪಾವತಿಸಲಾಗುತ್ತದೆ. ಈ ಸಂಬಂಧ ಕೆಲ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಪೋಲಿಸ ಠಾಣೆಗೆ ನೀಡಬೇಕಾಗುತ್ತದೆ. ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಎಸ್ಪಿ ಅಡ್ಡೂರು ಶ್ರೀನಿವಾಸಲು, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಸೇಡಂ ಸಹಾಯಕ ಆಯುಕ್ತ ಪ್ರಭು ರಡ್ಡಿ, ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಹಳ್ಳಿ, ಸಂಚಾರಿ ಪೊಲೀಸ್ ಇನ್ಸಪೆಕ್ಟರ್ ಶಕೀಲ ಅಂಗಡಿ, ಯುನೈಟೆಡ್ ಇನ್ಸೂರೆನ್ಸ್, ಕಂಪನಿಯ ಅಧಿಕಾರಿ ರಾಜೀವ, ರೆಡ್‍ಕ್ರಾಸ್ ಪರವಾಗಿ ರವೀಂದ್ರ ಶಾಬಾದಿ ಉಪಸ್ಥಿತರಿದ್ದರು.







