Kalaburagi | ಎಸ್‌ಐಆರ್‌ನಿಂದ ಅರ್ಹ ಮತದಾರರ ಹೆಸರು ಕೈಬಿಡುವ ಆತಂಕ: ಸಿಪಿಐ ಆರೋಪ

ಕಲಬುರಗಿ : ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ದೇಶಾದ್ಯಂತ ಲಕ್ಷಾಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದರಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಆರೋಪಿಸಿದೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 4.77 ಲಕ್ಷ ಹಾಗೂ ರಾಜ್ಯದಲ್ಲಿ 99.32 ಲಕ್ಷ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಕುರಿತು ಆತಂಕ ವ್ಯಕ್ತಪಡಿಸಿದರು. 2020ರಲ್ಲಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಮತದಾರರ ನೋಂದಣಿಗೆ ಸಂಬಂಧಿಸಿದ ನಿಯಮಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಧಕ್ಕೆ ತರುವಂತಿವೆ. ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಅರ್ಹ ಮತದಾರರನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.
ಅಂತಿಮ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿದೆ ಎನ್ನಲಾದ ಡಾ. ಸಂಪತ್ ರಾವ್, ಮರತೂರ ಗ್ರಾಮದ ಅಂಬರಾಯ್ಯ ಹಾಗೂ ಯಾದಗಿರಿಯ ಎಂ.ಡಿ. ಅತಿಕ್ ಅವರನ್ನು ಸುದ್ದಿಗೋಷ್ಠಿಯಲ್ಲಿ ಹಾಜರುಪಡಿಸಿ, ಎಸ್‌ಐಆರ್ ಪ್ರಕ್ರಿಯೆಯಲ್ಲಿನ ಲೋಪಗಳ ಕುರಿತು ಪ್ರಶ್ನಿಸಿದರು.
ರಾಜ್ಯದ ಜನಸಂಖ್ಯೆ 6.89 ಕೋಟಿ ಎಂದು ಅಂದಾಜಿಸಲಾಗಿದ್ದು, ಅದರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 5.19 ಕೋಟಿ ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಸಂಖ್ಯೆ 1.70 ಕೋಟಿ ಎಂದು ಅಂದಾಜಿಸಲಾಗಿದೆ. ಈ ಹಿಂದೆ ರಾಜ್ಯದ ಮತದಾರರ ಸಂಖ್ಯೆ 5.54 ಕೋಟಿ ಇತ್ತು. ಆದರೆ, ಪ್ರಸ್ತುತ ಎಸ್‌ಐಆರ್ ನಂತರ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ 4.55 ಕೋಟಿ ಮತದಾರರ ಹೆಸರುಗಳಿವೆ. ಸರ್ಕಾರದ ಜನಸಂಖ್ಯೆಯ ಅಂದಾಜಿನ ಪ್ರಕಾರ ನೋಡಿದರೂ ರಾಜ್ಯದಲ್ಲಿ 64 ಲಕ್ಷ ಜನರು ಏಕಾಏಕಿ ಕಾಣೆಯಾಗಿದ್ದಾರೆಯೇ? ಅವರೆಲ್ಲರೂ ವಿದೇಶಿಯರೇ ಎಂಬುದನ್ನು ಚುನಾವಣಾ ಆಯೋಗ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ಅಂತಿಮಗೊಳಿಸಿರುವ ಮತದಾರರ ಪಟ್ಟಿಯು ಅಪೂರ್ಣವಾಗಿದೆ ಎಂದು ಆರೋಪಿಸಿದ ಮುಖಂಡರು, ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರ ಹೆಸರುಗಳನ್ನು ತಕ್ಷಣ ಸೇರ್ಪಡೆಗೊಳಿಸಬೇಕು. ಪಟ್ಟಿಯಲ್ಲಿ ಹೆಸರು ಕಾಣೆಯಾಗಿರುವ ಅಥವಾ ಅನರ್ಹರೆಂದು ಗುರುತಿಸಿರುವ ಪ್ರಕರಣಗಳಿಗೆ ಸೂಕ್ತ ಕಾರಣ ನೀಡಬೇಕು. ಸಂಬಂಧಪಟ್ಟ ಮತದಾರರಿಗೆ ತಮ್ಮ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಎಸ್‌ಐಆರ್ ಪ್ರಕ್ರಿಯೆಯನ್ನು ಕೈಬಿಡಬೇಕು ಹಾಗೂ ಮತದಾರರ ಪಟ್ಟಿಯಿಂದ ತಾತ್ಕಾಲಿಕವಾಗಿ ಹೊರಗುಳಿದಿರುವ ಎಲ್ಲರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.
ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಸುಪ್ರೀಂ ಕೋರ್ಟ್‌ನ ಹಿಂದಿನ ನಿರ್ದೇಶನಗಳನ್ನು ಪಾಲಿಸಬೇಕು. ಕಲಬುರಗಿ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾದ 4.77 ಲಕ್ಷ ಮತದಾರರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ, ರಾಜ್ಯ ಮಂಡಳಿ ಸದಸ್ಯ ಕಾಂ. ಮೌಲಾ ಮುಲ್ಲಾ, ಡಾ. ಪಿ. ಸಂಪತ್ ರಾವ್, ಸಿದ್ದಪ್ಪ ಪಾಲ್ಕಿ, ಭೀಮಾಶಂಕರ್ ಮಾಡಿಯಾಳ, ಅಂಬರಾಯ್ಯ ಹಾಗೂ ಎಂ.ಡಿ. ಅತಿಕ್ ಉಪಸ್ಥಿತರಿದ್ದರು.






