ಕಲಬುರಗಿ | ಕುರುಬ ಸಮಾಜವನ್ನು ಎಸ್ ಟಿಗೆ ಸೇರಿಸಬಾರದೆಂಬ ಉಗ್ರಪ್ಪ ಹೇಳಿಕೆ ಖಂಡನೀಯ : ಮಹಾಂತೇಶ ಕೌಲಗಿ

ಕಲಬುರಗಿ : ಬೆಂಗಳೂರಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರದಲ್ಲಿ ಮಾಜಿ ಸಂಸದ ಉಗ್ರಪ್ಪ ಅವರು ಕುರುಬರನ್ನು ಎಸ್.ಟಿಗೆ ಸೇರ್ಪಡೆ ಮಾಡಬಾರದು ಎಂದು ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ ಎಂದು ಗೊಂಡ ಕುರುಬ ಎಸ್.ಟಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಹಾಂತೇಶ ಕೌಲಗಿ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರಪ್ಪನವರ ಹೇಳಿಕೆಯಿಂದ ನಮ್ಮ ಕುರುಬ ಸಮುದಾಯಕ್ಕೆ ಅಪಮಾನವಾಗಿದೆ, ತಮ್ಮ ಹೇಳಿಕೆಯನ್ನು ವಾಪಾಸ್ ಪಡೆದುಕೊಂಡು ಕೂಡಲೇ ಅವರು ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ರಾಜಮನೆತನದವರಾದ ನೀವೇ ಎಸ್.ಟಿ ಪಟ್ಟಿಯಲ್ಲಿ ಇರುತ್ತೀರಿ, ಆದರೆ ನಾವು ಆದಿವಾಸಿ ಕುರುಬರು ನಾವ್ಯಾಕೆ ಇರಬಾರದು ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಎಸ್.ಟಿ ಪಟ್ಟಿಯಲ್ಲಿ 50 ಜಾತಿಗಳಿವೆ, ಅದರಲ್ಲಿ ಗೊಂಡ, ಕಾಡುಕುರುಬ, ಜೇನು ಕುರುಬ ಮತ್ತಿತರರು ಇದ್ದಾರೆ, ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಕುರುಬರೇ ಎಸ್.ಟಿಯಲ್ಲಿದ್ದಾರೆ. ಆದರೂ ರಾಜ್ಯಾದ್ಯಂತ ಕುರುಬ ಸಮುದಾಯ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಎಸ್. ಟಿ ಸೇರ್ಪಡೆ ಅವಶ್ಯಕವಾಗಿದೆ. ಹಾಗಾಗಿ ಈ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬೈಲಪ್ಪ ನೆಲೋಗಿ, ರೇವಣಸಿದ್ಧ ಸಾತನೂರು, ಶರಣು ಕನಗೊಂಡ, ವಿಠ್ಠಲ ಪೂಜಾರಿ, ನಿಂಗಪ್ಪ ಸಾಗನೂರು, ವಿಜಯಲಕ್ಷ್ಮಿ ಮುಗಳಿ, ಲಕ್ಷ್ಮಣ ಪೂಜಾರಿ, ಶಂಕರ್ ಹೇರೂರು, ಸಿದ್ದಪ್ಪ ರಸ್ತಂಪೂರ, ವಿಠ್ಠಲ ಬರಗಾಲಿ ಸೇರಿದಂತೆ ಮತ್ತಿತರರು ಇದ್ದರು.







