Kalaburagi | ಚಿತ್ತಾಪುರದಲ್ಲಿ ಅ.31ರಂದು ಆರೆಸ್ಸೆಸ್ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ

ಸಾಂದರ್ಭಿಕ ಚಿತ್ರ
ಕಲಬುರಗಿ: ವಿಜಯದಶಮಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ವತಿಯಿಂದ ಅ.31ರಂದು ಚಿತ್ತಾಪುರ ಪಟ್ಟಣದಲ್ಲಿ ಆಯೋಜಿಸಿರುವ ಪಥಸಂಚಲನಕ್ಕೆ ಪೊಲೀಸ್ ಇಲಾಖೆ ವಿವಿಧ ಷರತ್ತುಗಳೊಂದಿಗೆ ಅನುಮತಿ ನೀಡಿದೆ.
ಪಥಸಂಚಲನ ಹಾಗೂ ಕಾರ್ಯಕ್ರಮವನ್ನು ಅಂದು ಮಧ್ಯಾಹ್ನ 3ರಿಂದ ಸಂಜೆ 7 ಗಂಟೆಯೊಳಗೆ ಪೂರ್ಣಗೊಳಿಸಬೇಕು. ನಿಗದಿತ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚಿತ್ತಾಪುರ ತಾಲೂಕಿನ ನಿವಾಸಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಸೂಚಿಸಿದೆ.
ಪೊಲೀಸ್ ಇಲಾಖೆ ನಿಗದಿಪಡಿಸಿರುವ ಮಾರ್ಗದಲ್ಲಿಯೇ ಪಥಸಂಚಲನ ನಡೆಸಬೇಕು. ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಬಸ್ ನಿಲ್ದಾಣ, ಡಾ. ಬಿ.ಆರ್.ಅಂಬೇಡ್ಕರ್ ವೃತ್ತ, ಭುವನೇಶ್ವರಿ ಚೌಕ್, ಜನತಾ ಚೌಕ್, ನಾಗಾವಿ ಚೌಕ್, ನಂದಕಿಶೋರ್ ಬಜಾಜ್ ಅವರ ಮನೆಯ ಎದುರುಗಡೆ, ಶ್ರೀ ಸೇವಾಲಾಲ್ ಚೌಕ್, ಪುರಸಭೆ ಕಚೇರಿ, ಹಳೇ ಗಂಜ್ ವೃತ್ತ, ಕಾಶಿಗಲ್ಲಿ ಗಣೇಶ ಮಂದಿರ ಹಾಗೂ ಲಾಡ್ಜಿಂಗ್ ಕ್ರಾಸ್ ಮೂಲಕ ಮತ್ತೆ ಬಜಾಜ್ ಕಲ್ಯಾಣ ಮಂಟಪಕ್ಕೆ ತಲುಪಬೇಕು. ನಿಗದಿಪಡಿಸಿದ ಮಾರ್ಗವನ್ನು ಹೊರತುಪಡಿಸಿ ಬೇರೆ ಯಾವುದೇ ಮಾರ್ಗ ಬಳಸುವಂತಿಲ್ಲ ಎಂದು ಅನುಮತಿಯಲ್ಲಿ ತಿಳಿಸಲಾಗಿದೆ.
ಪಥಸಂಚಲನಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಬಜಾಜ್ ಕಲ್ಯಾಣ ಮಂಟಪದ ಆವರಣದಲ್ಲಿಯೇ ಕಟ್ಟುನಿಟ್ಟಾಗಿ ನಡೆಸಬೇಕು. ನಿಗದಿತ ಸ್ಥಳವನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳು ಅಥವಾ ಬೀದಿಗಳಲ್ಲಿ ಯಾವುದೇ ಭಾಷಣ ಅಥವಾ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಕಾರ್ಯಕ್ರಮದ ಆಯೋಜಕರು, ಭಾಗವಹಿಸುವವರು ಹಾಗೂ ಆಹ್ವಾನಿತರು ರಾಜಕೀಯ ಭಾಷಣ ಮಾಡಬಾರದು. ಪ್ರಚೋದನಕಾರಿ ಭಾಷೆ ಅಥವಾ ಘೋಷಣೆಗಳನ್ನು ಬಳಸಬಾರದು ಎಂದು ಷರತ್ತು ವಿಧಿಸಲಾಗಿದೆ.
ಧ್ವಜಗಳು, ಬ್ಯಾನರ್ಗಳು ಹಾಗೂ ಬಂಟಿಂಗ್ಗಳನ್ನು ಅಳವಡಿಸಲು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಬ್ಯಾನರ್ ಮತ್ತು ಬಂಟಿಂಗ್ಗಳಲ್ಲಿ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಮುದ್ರಿಸಬಾರದು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲಿಯೂ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು. ಧ್ವನಿವರ್ಧಕ ಬಳಸುವುದಾದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ಸೂಚಿಸಲಾಗಿದೆ.
ಪಥಸಂಚಲನ ಹಾಗೂ ಸಮಾರಂಭದ ವೇಳೆ ಸಾರ್ವಜನಿಕರಿಗೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜನರು ನೂಕುನುಗ್ಗಲು ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಕಾರ್ಯಕ್ರಮದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾದರೆ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಹಾನಿಯ ನಷ್ಟವನ್ನು ಆಯೋಜಕರೇ ಭರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಷರತ್ತುಗಳನ್ನು ವಿಧಿಸಿ ಪೊಲೀಸ್ ಇಲಾಖೆ ಅನುಮತಿ ನೀಡಿದೆ.






