Kalaburagi | ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ನೀಡದ ಕಾಂಗ್ರೆಸ್: ಗೌರಿ ಆರ್.ಚಿಚಕೋಟಿ ಆಕ್ರೋಶ

ಕಲಬುರಗಿ : ಮಹಿಳಾ ಸಬಲೀಕರಣ, ಮಹಿಳಾ ಮೀಸಲಾತಿ ಹಾಗೂ ಮಹಿಳೆಯರ ಹಕ್ಕುಗಳ ಕುರಿತು ಮಾತನಾಡುವ ಕಾಂಗ್ರೆಸ್ ಸರ್ಕಾರ ತನ್ನ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ನೀಡದೇ ಮಹಿಳಾ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಗೌರಿ ಆರ್. ಚಿಚಕೋಟಿ ಆರೋಪಿಸಿದರು.
ಈ ಕುರಿತು ಮಾತನಾಡಿದ ಅವರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆಯಬೇಕು ಎಂದು ಹೇಳುವ ಕಾಂಗ್ರೆಸ್ ನಾಯಕತ್ವ, ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ವಿಫಲವಾಗಿದೆ. ಇದು ಮಹಿಳಾ ಸಬಲೀಕರಣದ ಕುರಿತು ಕಾಂಗ್ರೆಸ್‌ನ ದ್ವಂದ್ವ ನಿಲುವನ್ನು ಬಯಲಿಗೆಳೆಯುತ್ತದೆ ಎಂದು ಟೀಕಿಸಿದರು.
‘ಮೈ ಲಡ್ಕಿ ಹೂಂ, ಮೈ ಲಡ್ ಸಕ್ತಿ ಹೂಂ’ ಎಂಬ ಘೋಷಣೆ ನೀಡುವ ಕಾಂಗ್ರೆಸ್, ರಾಜ್ಯದಲ್ಲಿ ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕಲ್ಪಿಸದಿರುವುದು ವಿಪರ್ಯಾಸವಾಗಿದೆ ಎಂದು ಹೇಳಿದರು.
ಸಚಿವ ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡ ಅವರ ಹೆಸರು ಪರಿಗಣನೆಯಲ್ಲಿದ್ದರೂ, ಅವರಿಗೆ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ನೀಡದಿರುವುದು ವಿಷಾದನೀಯ. ಇದು ಕೇವಲ ಹಿಂದುಳಿದ ಸಮಾಜಕ್ಕೆ ಮಾತ್ರವಲ್ಲ, ಸಮಸ್ತ ಮಹಿಳಾ ಸಮುದಾಯದ ಆಶಯಗಳಿಗೂ ಮಾಡಿದ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದರು.
ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಗೌರವ ನೀಡುವುದಾಗಿ ಹೇಳುವ ಕಾಂಗ್ರೆಸ್ ಸರ್ಕಾರ, ಸಚಿವ ಸಂಪುಟದಲ್ಲಿ ಮಹಿಳೆಗೆ ಸ್ಥಾನ ನೀಡದಿರುವುದಕ್ಕೆ ರಾಜ್ಯದ ಜನರ ಮುಂದೆ ಸ್ಪಷ್ಟನೆ ನೀಡಬೇಕು ಎಂದು ಗೌರಿ ಆರ್. ಚಿಚಕೋಟಿ ಆಗ್ರಹಿಸಿದರು.






