ಕಲಬುರಗಿ | ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭದ್ರತೆ ನೀಡುವಂತೆ ಕಾಂಗ್ರೆಸ್ ಮುಖಂಡರ ಆಗ್ರಹ

ಕಲಬುರಗಿ: ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಸಚಿವರಿಗೆ ಸೂಕ್ತ ರಕ್ಷಣೆ ಮತ್ತು ಭದ್ರತೆ ನೀಡುವಂತೆ ಕಾಂಗ್ರೆಸ್ ಮುಖಂಡರಾದ ಭೀಮನಗೌಡ ಪರಗೊಂಡ, ಸಂದೀಪ್ ಮಾಳಗೆ ಹಾಗೂ ಕಿಶೋರ್ ಗಾಯಕವಾಡ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದೇಶ ಮತ್ತು ರಾಜ್ಯದ ಆಂತರಿಕ ಭದ್ರತೆಗೆ ಸವಲಾಗಿರುವ ಹಾಗೂ ನೋಂದಾಯಿತವಲ್ಲದ ಸಂಘಟನೆಯಾದ ಆರೆಸ್ಸೆಸ್ ವಿರುದ್ಧ ನಿರಂತರವಾಗಿ ದಾಖಲೆಗಳ ಸಮೇತ ಜನಹಿತ ಶಕ್ತಿಗಾಗಿ ಮಾತನಾಡುತ್ತಿರುವ ಮತ್ತು ಭವಿಷ್ಯದ ಪೀಳಿಗೆಯ ರಕ್ಷಣೆಗಾಗಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಲುವಿನ ಬಗ್ಗೆ ಆಕ್ಷೇಪ ಮತ್ತು ಭಿನ್ನಾಭಿಪ್ರಾಯ ಇದ್ದವರು ಸಚಿವರು ಕೇಳಲಾದ ಪ್ರಶ್ನೆಗಳಿಗೆ ಸಾರ್ವಜನಿಕ ಚರ್ಚೆಯನ್ನು ಇಲ್ಲವೇ ಸಂವಾದ ಇಟ್ಟುಕೊಳ್ಳಲಿ. ಆದರೆ ಸಂವಾದ ಮತ್ತು ಚರ್ಚೆಯನ್ನು ಮಾಡಲಿಕ್ಕೆ ಇಚ್ಚಿಸದೆ, ಸಚಿವರನ್ನೇ ಬೆದರಿಸುವ ಹೀನ ಕೃತ್ಯಕ್ಕೆ ಇಳಿದಿರುವುದು ಖಂಡನೀಯ ಎಂದು ಹೇಳಿದ್ದಾರೆ.





