Kalaburagi | ಅಲ್ಪಸಂಖ್ಯಾತರ ರಾಜಕೀಯ ಬೆಳವಣಿಗೆ ತಡೆಯಲು ಕಾಂಗ್ರೆಸ್ನಲ್ಲಿ ವ್ಯವಸ್ಥಿತ ಪ್ರಯತ್ನ: ನಾಸಿರ್ ಹುಸೇನ್ ಉಸ್ತಾದ್ ಆರೋಪ

ಕಲಬುರಗಿ : ಕಾಂಗ್ರೆಸ್ನಲ್ಲಿ ಒಬ್ಬ ಮುಸ್ಲಿಂ ನಾಯಕ ಬೆಳೆಯುತ್ತಿದ್ದಂತೆ ಅವರ ಎದುರು ಮತ್ತೊಬ್ಬ ಡಮ್ಮಿ ನಾಯಕನನ್ನು ಬೆಳೆಸಿ ಅಧಿಕಾರ ನೀಡುವ ಮೂಲಕ ಅಲ್ಪಸಂಖ್ಯಾತರ ರಾಜಕೀಯ ಬೆಳವಣಿಗೆಯನ್ನು ವ್ಯವಸ್ಥಿತವಾಗಿ ತಡೆಯಲಾಗುತ್ತಿದೆ ಎಂದು ಜೆಡಿಎಸ್ ಮುಖಂಡ ನಾಸಿರ್ ಹುಸೇನ್ ಉಸ್ತಾದ್ ಆರೋಪಿಸಿದರು.
ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದವರು, ದಲಿತರು ಮತ್ತು ಅಲ್ಪಸಂಖ್ಯಾತರ ಭಾವನೆಗಳೊಂದಿಗೆ ಕಾಂಗ್ರೆಸ್ ಆಟವಾಡುತ್ತಿದೆ. ಖರ್ಗೆ ಕುಟುಂಬವು ಅಲ್ಪಸಂಖ್ಯಾತ ನಾಯಕರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸುತ್ತಿದೆ. ಝಮೀರ್ ಅಹ್ಮದ್ ಖಾನ್ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲು ಮತ್ತೊಬ್ಬ ನಾಯಕನನ್ನು ಬೆಳೆಸುವ ನಾಟಕ ನಡೆಯುತ್ತಿದೆ ಎಂದು ದೂರಿದರು.
ಕುಮಾರಸ್ವಾಮಿ ಅವರನ್ನು ಉದ್ಯೋಗವಿಲ್ಲದ ಮಂತ್ರಿ ಎಂದು ಟೀಕಿಸುವುದು ಸರಿಯಲ್ಲ. ಅವರ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ. ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಪ್ರಿಯಾಂಕ್ ಖರ್ಗೆ ವಿಫಲರಾಗಿದ್ದಾರೆ ಎಂದು ನಾಸಿರ್ ಹುಸೇನ್ ಟೀಕಿಸಿದರು.
ಜಿಲ್ಲೆಯಲ್ಲಿ ಬರಗಾಲ, ಕಬ್ಬು ಬೆಳೆಗಾರರ ಸಂಕಷ್ಟ ಸೇರಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಗುರವಾಗಿ ಮಾತನಾಡುತ್ತಿರುವುದು ಖಂಡನೀಯ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಹೇಳಿದರು.
ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದರೂ ಮೂವರು ಸಚಿವರು ಗ್ರಾಮಗಳಿಗೆ ಭೇಟಿ ನೀಡಿಲ್ಲ. ಕೆಡಿಪಿ ಸಭೆಯನ್ನೂ ನಡೆಸದೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ ಜನರ ನೈಜ ಸಮಸ್ಯೆಗಳನ್ನು ನಿರ್ಲಕ್ಷಿಸಿದ್ದಾರೆ. ಸ್ಟಿಂಗ್ ಆಪರೇಷನ್ ವಿಚಾರವನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಕೃಷ್ಣ ರೆಡ್ಡಿ, ಮಹೇಶ್ವರಿ ವಾಲಿ, ಪ್ರವೀಣ್ ಜಾಧವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.






