ಕಲಬುರಗಿ | ಸೇಡಂನಲ್ಲಿ ಸಂವಿಧಾನ ದಿನಾಚರಣೆ

ಕಲಬುರಗಿ : ದೇಶಕ್ಕಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಲ್ಲಿಸಿದ ಸೇವೆ ಅಪ್ರತಿಮ, ದೇಶಕ್ಕೆ ಅವರು ನೀಡಿದ ಸಂವಿಧಾನವನ್ನು ಪ್ರತಿಯೊಬ್ಬ ವ್ಯಕ್ತಿಯು ಓದಬೇಕು ಎಂದು ಸಹಾಯಕ ಆಯುಕ್ತ ಪ್ರಭು ರೆಡ್ಡಿ ಹೇಳಿದರು.
ಸೇಡಂ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಪಂ ಸಭಾಂಗಣದಲ್ಲಿ ಭಾರತೀಯ ಸಂವಿಧಾನವು ಜಾರಿಗೆ ಬಂದು 75 ವರ್ಷ ಪೂರ್ಣಗೊಂಡ ಹಿನ್ನೆಲೆ ಸಂವಿಧಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಪ್ರತಿಯೊಂದು ರಾಜ್ಯಗಳಿಗೆ ಸುತ್ತಾಡಿ ಅಲ್ಲಿರುವ ಜನರ ಕುಂದು ಕೊರತೆಗಳನ್ನು ಅರಿತುಕೊಂಡು ಸಮಾನವಾದ ಸಂವಿಧಾನ ನೀಡಿ ಸಮಾನತೆ ಸಾರಿದ ಮಹಾನ್ ನಾಯಕರಾಗಿದ್ದಾರೆ. ಸಂವಿಧಾನದ ತತ್ವಗಳು ಮತ್ತು ಮಹತ್ವದ ಬಗ್ಗೆ ದೇಶದ ಪ್ರತಿಯೊಬ್ಬ ವ್ಯಕ್ತಿಯು ಅರಿಯುವುದು ಮತ್ತು ಜಾಗೃತರಾಗಿರುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಸೇಡಂ ಪಟ್ಟಣದ ಶ್ರೀ ಕೋತ್ತಲ ಬಸವೇಶ್ವರ ದೇವಾಲಯದಿಂದ ಸಂವಿಧಾನ ಜಾಥಾ ಪ್ರಮುಖ ರಸ್ತೆಗಳ ಮೂಲಕ ತಾಪಂ ಸಭಾಂಗಣದವರೆಗೆ ನಡೆಯಿತು.
ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚೆನ್ನಪ್ಪ ರಾಯಣ್ಣನ, ತಾಲೂಕ ಆರೋಗ್ಯ ಅಧಿಕಾರಿ ಡಾ.ಸಂಜುಕುಮಾರ್ ಪಾಟೀಲ್, ಸಿಪಿಐ ಮಹಾದೇವ ದಿಡಿಮನಿ, ಅರವಿಂದ್ ಪಸಾರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಪಂಡಿತ್ ಬಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಅನುರಾಧ ಪಾಟೀಲ್, ಶಿವಶಂಕ್ರಯ್ಯ ಸ್ವಾಮಿ ಇಮಡಾಪೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.







