ಕಲಬುರಗಿ | ಧರ್ಮ ಗ್ರಂಥಕ್ಕಿಂತ ಶ್ರೇಷ್ಠ ಸಂವಿಧಾನ : ರಾಯಪ್ಪ ಹುಣಸಗಿ

ಕಲಬುರಗಿ: ದೇಶದ ಪ್ರತಿ ಪ್ರಜೆ ಗೌರವಯುತ ಬದುಕಿಗೆ ನಾಂದಿ ಹಾಡಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಭಾರತದ ಸಂವಿಧಾನವು ಧರ್ಮ ಗ್ರಂಥಕ್ಕಿಂತ ಶ್ರೇಷ್ಠವಾದದ್ದು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಲಬುರಗಿ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಕಲಬುರಗಿ ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ ಮಹಾನ್ ಚಿಂತನೆಗೆ ಗಾನ ನಮನ ಅರ್ಪಿಸುವ "ಭೀಮ ಗಾಯನ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಸದೃಢವಾಗಬೇಕಾದರೆ ಎಲ್ಲರೂ ಸಂವಿಧಾನಕ್ಕೆ ತಲೆಬಾಗಬೇಕು. ಬಲಾಢ್ಯ ಸಂವಿಧಾನ ಇರುವ ಕಾರಣವೇ ಇಂದು ದೇಶ ಪ್ರಗತಿ ಹಾದಿಯಲ್ಲಿ ಸಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ರಾಜ್ಯದ 12 ಆಯ್ದ ಸ್ಥಳಗಳಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಜೀವನ ಸಾಧನೆ, ಸಮಾನತೆಯ ಹೋರಾಟ, ಅಸ್ಪೃಶ್ಯತೆ ನಿರ್ಮೂಲನೆ, ಸ್ತ್ರೀ ಸಮಾನತೆ ಕುರಿತ ಗೀತೆಗಳನ್ನೊಳಗೊಂಡ ಸಮಾನತೆಯ ಸ್ವರ ಸಂಭ್ರಮ ಕಾರ್ಯಕ್ರಮವನ್ನು ಅಯೋಜಿಸರುವುದು ಪ್ರಸ್ತುತವಾಗಿದೆ.
ಗಾಯನ ಸಂಭ್ರಮಿಸಿದ ವಿದ್ಯಾರ್ಥಿ ಸಮೂಹ :
ಭೀಮನ ಆದರ್ಶಗಳನ್ನು ಸ್ವರಗಳಲ್ಲಿ ಜೀವಂತಗೊಳಿಸುವ ಜಾಗೃತಿ, ಆತ್ಮಗೌರವ ಮತ್ತು ಸಮಾನತೆಯ ಸ್ವರ ಸಂಭ್ರಮದ ಭೀಮ ಗಾಯನವನ್ನು ಚಿಕ್ಕಬಳ್ಳಾಪುರದ ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘವು ನಡೆಸಿಕೊಟ್ಟಿತ್ತು. ಅಂಬೇಡ್ಕರ್ ಅವರ ಜೀವನ ಚರಿತ್ರೆ, ಸಮಾಜದಲ್ಲಿ ಅಡಗಿರುವ ಮೌಢ್ಯನಂಬಿಕೆ ಕಂದಾಚಾರ, ಹೋರಾಟದ ಕುರಿತು ಅನೇಕ ಗೀತೆಗಳನ್ನು ಕಲಾವಿದರು ತುಂಬಾ ಸುಶ್ರಾವ್ಯವಾಗಿ ಹಾಡಿ ಜನರಲ್ಲಿ ಜಾಗೃತಿ ಮೂಡಿಸಿದರು. ಇನ್ನು ಭೀಮನ ಗೀತೆಗಳಿಗೆ, ತಮಟೆ ವಾದನಕ್ಕೆ ವಿದ್ಯಾರ್ಥಿ ಸಮೂಹ ಹೆಜ್ಜೆ ಹಾಕಿ ಸಂಭ್ರಮಿಸಿತು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಿಕಾ ಮಾನ್ಯತಾ ಸಮಿತಿ ಸದಸ್ಯ ಗುರುರಾಜ ಕುಲಕರ್ಣಿ, ಭಾರತೀಯ ದಲಿತ ಫ್ಯಾಂಥರ್ ರಾಜ್ಯಾಧ್ಯಕ್ಣ ಮಲ್ಲಪ್ಪ ಹೊಸಮನಿ, ದಲಿತ ಮುಖಂಡ ಎ.ಬಿ.ಹೊಸಮನಿ, 135ನೇ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯೋತ್ಸವ ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ ವೀರಾನಾಯಕ್, ರಾಜ್ಯ ಎಸ್.ಸಿ-ಎಸ್.ಟಿ ಸರ್ಕಾರಿ-ಅರೇ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹೇಶ ಹುಬಳಿ ಸೇರಿದಂತೆ ದಲಿತಪರ ಹಾಗೂ ಇತರೆ ಎಲ್ಲ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸರ್ವರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.







