ಕಲಬುರಗಿ | ಜನಸಂಖ್ಯೆ ನಿಯಂತ್ರಿಸುವುದು ಅತಿ ದೊಡ್ಡ ಸವಾಲು : ಡಾ.ಮೈತ್ರಾದೇವಿ

ಕಲಬುರಗಿ : ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸುವುದು ಪ್ರಸ್ತುತ ದಿನಗಳಲ್ಲಿ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಪ್ರಾಧ್ಯಪಕಿ ಡಾ.ಮೈತ್ರಾದೇವಿ ಹಳೆಮನಿ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಚ್‌ಕೆಇಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ ಸರ್ಕಾರದ ಯುವ ಜನ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ, ಜನಕಲ್ಯಾಣ ಎಡ್ಜುಕೇಷನ್ ಆಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಹಾಗೂ ಯುತ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ಜಾಗತಿಕವಾಗಿ ಗರ್ಭಿಣಿ ಮಹಿಳೆಯರಲ್ಲಿ ಅನಾರೋಗ್ಯ ಮತ್ತು ಸಾವಿಗೆ ಪ್ರಮುಖ ಕಾರಣವಾಗಿರುವ ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ವಿಶ್ವ ಜನಸಂಖ್ಯಾ ದಿನದ ಗುರಿಯಾಗಿದೆ. ಕುಟುಂಬ ಯೋಜನೆ, ಲಿಂಗ ಸಮಾನತೆ, ತಾಯಿ ಮತ್ತು ಮಕ್ಕಳ ಆರೋಗ್ಯ, ಬಡತನ, ಮಾನವ ಹಕ್ಕುಗಳು, ಲೈಂಗಿಕ ಶಿಕ್ಷಣ, ಗರ್ಭನಿರೋಧಕ ಬಳಕೆ ಮತ್ತು ಹದಿಹರೆಯದ ಗರ್ಭಧಾರಣೆಯಂತಹ ವಿಷಯಗಳ ಕುರಿತು ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಈ ದಿನವು ಜನರನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಜನಕಲ್ಯಾಣ ಎಡ್ಜುಕೇಷನ್ ಆಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಅಧ್ಯಕ್ಷರಾದ ಸುರೇಶ್ ಎಸ್ ಕಾನೇಕರ್ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಉಷಾದೇವಿ ಪಾಟೀಲ್ ವಹಿಸಿದ್ದರು. ಕಲಬುರಗಿ ಯೂತ್ ಅಡ್ವೆಂಚರ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್ ಕನ್ನಡಗಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪತ್ರಿಕಾ ಮಾಧ್ಯಮದ ಸಂಚಾಲಕ ಐ ಕೆ ಪಾಟೀಲ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಉಪನ್ಯಾಸಕಿ ಝೈಭಾ ಅಕ್ತರ ಕಾರ್ಯಕ್ರಮ ನಿರೂಪಿಸಿದರು, ಜಾನಕಿ ಟಿ. ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು, ಸಿದ್ದಮ್ಮ ಹಾಗೂ ಭಾಗ್ಯಜ್ಯೋತಿ ಪ್ರಾರ್ಥಿಸಿದರು, ಜವೇರಿಯಾ ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.







